ಯಲ್ಲಾಪುರ: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಮಾನಿಗದ್ದೆ-ಕುಂಬ್ರಿಯ ಗಣಪತಿ ಹರಿ ಗಾಂವ್ಕರ್ ಅವರ ನಿಧನಕ್ಕೆ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಕಳಚೆ ವತಿಯಿಂದ ಸಂಘದ ಪ್ರಧಾನ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಸಂಘದ ನಿರ್ದೇಶಕ ಶ್ರೀಪಾದ್ ಗಾಂವ್ಕರ್ ಸ್ವಾಗತಿಸಿದರು. ಬಳಿಕ ಸಂಘದ ಅಧ್ಯಕ್ಷ ಉಮೇಶ್ ಭಾಗ್ವತ್ ಅವರು ದಿವಂಗತ ಗಣಪತಿ ಹರಿ ಗಾಂವ್ಕರ್ ಅವರ ಯಕ್ಷಗಾನ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಬಳಿಕ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ದಿವಂಗತರ ಮೊಮ್ಮಗ ಜಿ.ಕೆ. ಪ್ರಸಾದ್ ಕೂಡ ಉಪಸ್ಥಿತರಿದ್ದು, ಸಾರ್ವಜನಿಕರು ಅವರ ಕುಟುಂಬದ ದುಃಖದಲ್ಲಿ ಭಾಗಿಯಾದರು.
ಇದೇ ವೇಳೆ ಕಳೆದ ಹತ್ತು ವರ್ಷಗಳಿಂದ ಯಲ್ಲಾಪುರದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ‘ಶ್ರಾವಣ ಯಕ್ಷ ಸಂಭ್ರಮ’ ಆಯೋಜಕರ ಪರವಾಗಿಯೂ ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವ ಸಲ್ಲಿಸಲಾಯಿತು. ಶ್ರಾವಣ ಯಕ್ಷ ಸಂಭ್ರಮದ ಸಂಚಾಲಕ ರಾಘವೇಂದ್ರ ಭಟ್ಟ ಬೆಳಸೂರು ಅವರು ದಿವಂಗತ ಕಲಾವಿದರ ಕುಟುಂಬಕ್ಕೆ ಸಾಂತ್ವನ ಸೂಚಿಸಿ, ಈ ವರ್ಷದ ಶ್ರಾವಣ ಯಕ್ಷ ಸಂಭ್ರಮದ ಆಹ್ವಾನವನ್ನೂ ನೀಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಹ್ಯಾದ್ರಿ ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಗ್ರಾಮದ ಹಿತೈಷಿಗಳು ಉಪಸ್ಥಿತರಿದ್ದು, ಹಿರಿಯ ಯಕ್ಷಗಾನ ಕಲಾವಿದರಿಗೆ ಅಂತಿಮ ನಮನ ಸಲ್ಲಿಸಿದರು.