Monday, September 7, 2026
Join WhatsApp Group
HomeCrimeಕಾಡಿನಲ್ಲಿ ಕೌಶಲ್ಯದಾಟ; ಐವರು ವಶಕ್ಕೆ

ಕಾಡಿನಲ್ಲಿ ಕೌಶಲ್ಯದಾಟ; ಐವರು ವಶಕ್ಕೆ

ಮುಂಡಗೋಡದಲ್ಲಿ ಅರಣ್ಯ ಪ್ರದೇಶವೇ ಜುಗಾರಿಗಳ ಅಡ್ಡೆ?

ಮುಂಡಗೋಡ: ಪಟ್ಟಣದ ಗಣೇಶನಗರದ ಷರೀಫ್ ಅಜ್ಜಾ ದೇವಸ್ಥಾನದ ಪಕ್ಕದ ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಇಸ್ಪೀಟ್‌ ಆಡುತ್ತಿದ್ದ ಐವರನ್ನು ಮುಂಡಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ.22ರಂದು ರಾತ್ರಿ 10.30ರ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ ಗಣೇಶನಗರ ನಿವಾಸಿಗಳಾದ ಪ್ರವೀಣ ವರ್ಣೇಕರ (35), ಮಂಜುನಾಥ ಸುಣಗಾರ (24), ಸಂದೀಪ ಸುಣಗಾರ (29), ನಾಗರಾಜ ಹೂಗಾರ (36) ಹಾಗೂ ಗಾಂಧಿನಗರದ ಮಂಜುನಾಥ ಕುಂಬಾರ (27) ಸಿಕ್ಕಿಬಿದ್ದಿದ್ದಾರೆ.ಆರೋಪಿತರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೂಟ ಕಟ್ಟಿಕೊಂಡು ತಮ್ಮ ಲಾಭಕ್ಕಾಗಿ 52 ಇಸ್ಪೀಟ್‌ ಎಲೆಗಳಿಂದ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅವರಿಂದ ₹1,660 ನಗದು, 52 ಇಸ್ಪೀಟ್‌ ಎಲೆಗಳು ಹಾಗೂ ಎರಡು ಮೇಣದ ಬತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಗೌಡರ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಆದರೆ, ಈ ಪ್ರಕರಣದಾಚೆಗೂ ಮುಂಡಗೋಡದಲ್ಲಿ ಜುಗಾರಿ ದಂಧೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನೇ ಜುಗಾರಿ ಕೂಟಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜನವಸತಿ ಪ್ರದೇಶಗಳಿಂದ ದೂರ, ಪೊಲೀಸರ ಕಣ್ಣಿಗೆ ಸುಲಭವಾಗಿ ಬೀಳದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇಂತಹ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪವೂ ಇದೆ. ಇದರ ಜೊತೆಗೆ, ಹೊರ ಪ್ರದೇಶಗಳಿಂದ ಕೆಲ ‘ಕಿಂಗ್‌ಪಿನ್‌ಗಳು’ ಮುಂಡಗೋಡಕ್ಕೆ ಬಂದು ಜುಗಾರಿ ಆಟಗಳನ್ನು ಆಯೋಜಿಸುತ್ತಾರೆ ಅಥವಾ ಆಟವಾಡಿಸುತ್ತಾರೆ ಎಂಬ ಆರೋಪವೂ ಸ್ಥಳೀಯವಾಗಿ ಕೇಳಿಬರುತ್ತಿದೆ.

ಇಂತಹ ಆರೋಪಗಳ ಹಿಂದೆ ನಿಜಾಂಶವಿದೆಯೇ? ಹೊರಗಿನಿಂದ ಬರುವವರು ಯಾರು? ಜುಗಾರಿ ಕೂಟಗಳಿಗೆ ಹಣ, ಸ್ಥಳ ಮತ್ತು ಆಟಗಾರರನ್ನು ಒದಗಿಸುವವರು ಯಾರು? ಎಂಬ ಪ್ರಶ್ನೆಗಳೂ ಇದೀಗ ಎದುರಾಗಿವೆ.

ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಕೂಟಗಳ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಿ, ಕೇವಲ ಆಟಗಾರರನ್ನಷ್ಟೇ ಅಲ್ಲದೆ ಜುಗಾರಿ ಕೂಟಗಳನ್ನು ಆಯೋಜಿಸುವವರ ಹಾಗೂ ಹಿಂದಿರುವ ಪ್ರಮುಖ ವ್ಯಕ್ತಿಗಳನ್ನೂ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬರುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share