ಶಿರಸಿ: ಸಹಕಾರಿ ಸಂಘದಲ್ಲಿ ಠೇವಣಿಯಾಗಿದ್ದ ಸಾರ್ವಜನಿಕರ ಹಣವನ್ನು ಸುಳ್ಳು ಠರಾವು ಹಾಗೂ ನಕಲಿ ದಾಖಲೆಗಳ ಮೂಲಕ ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಇಬ್ಬರು ಮಾಜಿ ಸಿಬ್ಬಂದಿಗಳ ವಿರುದ್ಧ ದೂರು ದಾಖಲಾಗಿದೆ.
ಶಿರಸಿ ತಾಲೂಕಿನ ನೆಗ್ಗು ಸಮೀಪದ ಗೋಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾರುಗಾರ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ನೆಗ್ಗುವಿನ ವಿನಾಯಕ ಭಟ್ಟ ಅಡ್ಲೇಮನೆ ಹಾಗೂ ಲೆಕ್ಕಾಧಿಕಾರಿಯಾಗಿದ್ದ ಶಿರಸಿ ಗಾಂಧೀನಗರದ ರಾಮಚಂದ್ರ ಪರಮೇಶ್ವರ ಹೆಗಡೆ ಟೊಣ್ಣೆಮನೆ ಅವರು ಸೇರಿಕೊಂಡು ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಸ್ತುತ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ರಾಮಾ ಮಾಬ್ಲ ಗೌಡ ಅವರು ಸಂಘದ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ 2021ರ ಏಪ್ರಿಲ್ 4ರಿಂದ 2024ರ ಮಾರ್ಚ್ 31ರವರೆಗೆ ಒಟ್ಟು 10,54,11,662 ರೂ ಹಣದ ದುರುಪಯೋಗವಾಗಿರುವುದು ಪತ್ತೆಯಾಗಿದೆ.
ಸಂಘದ ಆಡಳಿತ ಮಂಡಳಿಗೆ ಮಾಹಿತಿ ನೀಡದೆ ಸುಳ್ಳು ಠರಾವುಗಳನ್ನು ಸಿದ್ಧಪಡಿಸುವುದು, ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹಣವನ್ನು ಸ್ವಂತ ಬಳಕೆಗೆ ಬಳಸಿಕೊಂಡಿರುವ ಆರೋಪವನ್ನು ಇಬ್ಬರ ಮೇಲೂ ಮಾಡಲಾಗಿದೆ.
ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿರುವ ರಾಮಾ ಗೌಡ ಅವರು ಅವುಗಳನ್ನು ಪೊಲೀಸರಿಗೆ ಸಲ್ಲಿಸಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
10 ಕೋಟಿಗೂ ಅಧಿಕ ಮೊತ್ತದ ಆರೋಪವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಸಹಕಾರಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ. ದೂರು ಹಾಗೂ ಲಭ್ಯ ದಾಖಲೆಗಳ ಆಧಾರದ ಮೇಲೆ ಪೊಲೀಸರು ನಡೆಸಲಿರುವ ತನಿಖೆಯಿಂದ ಹಣದ ದುರುಪಯೋಗದ ಪ್ರಮಾಣ ಮತ್ತು ಪ್ರಕರಣದ ನೈಜ ಚಿತ್ರಣ ಸ್ಪಷ್ಟವಾಗಬೇಕಿದೆ.