17ರ ವಯಸ್ಸಿನಲ್ಲಿ ಶುರುವಾದ ಹೋರಾಟದ ಹೆಜ್ಜೆ ಐದು ದಶಕಗಳ ಬಳಿಕವೂ ನಿಂತಿಲ್ಲ!
ಯಲ್ಲಾಪುರ: ಕೆಲವರ ಸಾರ್ವಜನಿಕ ಬದುಕು ಹುದ್ದೆಗಳಿಂದ ಗುರುತಾಗುತ್ತದೆ. ಇನ್ನು ಕೆಲವರ ಬದುಕು ಅವರು ನಿಂತ ಹೋರಾಟಗಳಿಂದಲೇ ನೆನಪಾಗುತ್ತದೆ. ಯಲ್ಲಾಪುರದ ರಾಮು ಹೊನ್ನಪ್ಪ ನಾಯ್ಕ ಅವರ ಸಾರ್ವಜನಿಕ ಜೀವನವನ್ನು ನೋಡಿದಾಗ ಎರಡನೆಯ ಸಾಲೇ ಹೆಚ್ಚು ಸೂಕ್ತವಾಗಿ ಕಾಣುತ್ತದೆ.
ವಿದ್ಯಾರ್ಥಿ ಜೀವನದಲ್ಲೇ ಹೋರಾಟಕ್ಕೆ ಧುಮುಕಿದ ರಾಮು ನಾಯ್ಕ, ಸಂಘಟನೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದಾರೆ. ಇಂದು, ಆಗಸ್ಟ್ 31ರಂದು ಅವರ 69ನೇ ಜನ್ಮದಿನ. ಈ ಸಂದರ್ಭದಲ್ಲಿ ಅವರ ಬದುಕಿನ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡುವುದು ಎಂದರೆ ಯಲ್ಲಾಪುರದ ಹಲವು ಹಕ್ಕೊತ್ತಾಯಗಳ ಇತಿಹಾಸದ ಪುಟಗಳನ್ನೂ ತಿರುವಿದಂತಾಗುತ್ತದೆ.
ರಾಮು ನಾಯ್ಕ ಅವರ ಸಾರ್ವಜನಿಕ ಬದುಕಿನ ಆರಂಭ 1970ರ ದಶಕದಲ್ಲಿ. 1973ರಿಂದ ಜನಸಂಘದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಅವರು, 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇನ್ನೂ ಕಾಲೇಜು ವಿದ್ಯಾರ್ಥಿ. ಆಗ ಅವರು ಕೇವಲ 17ರ ಕುಡಿಮೀಸೆಯ, ಹುರುಪು ರಕ್ತದ ಯುವಕ. ಕಾಲೇಜು ಶಿಕ್ಷಣವನ್ನೇ ಮೊಟಕುಗೊಳಿಸಿ ಭೂಗತವಾಗಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡದ್ದು ಅವರ ಬದುಕಿನ ಮಹತ್ವದ ತಿರುವು.
ಆ ದಿನಗಳಲ್ಲಿ ಆರ್ಎಸ್ಎಸ್ ಮತ್ತು ಪತ್ರಿಕೆಗಳ ಮೇಲೆ ನಿರ್ಬಂಧವಿದ್ದ ಸಂದರ್ಭದಲ್ಲಿ ಪುಂಗವ, ಕಹಳೆ ಮುಂತಾದ ಕೈಬರಹದ ಪತ್ರಿಕೆಗಳನ್ನು ಸೈಕ್ಲೋಸ್ಟೈಲ್ ಮಾಡಿ ಸತ್ಯಾಗ್ರಹಿಗಳ ಕುಟುಂಬಗಳಿಗೆ ಗುಪ್ತವಾಗಿ ತಲುಪಿಸುವ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದರು ಎನ್ನುವುದು ಅವರ ಹೋರಾಟದ ಆರಂಭದ ದಿನಗಳ ಪ್ರಮುಖ ಸಂಗತಿ.
ಇದೇ ಕಾರ್ಯಾಚರಣೆಯ ಸಂದರ್ಭದಲ್ಲಿ 1975ರ ಡಿಸೆಂಬರ್ನಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ಸುಮಾರು ಆರು ತಿಂಗಳು ಕಾರವಾರ ಜೈಲಿನಲ್ಲಿ ರಾಜಕೀಯ ಬಂಧಿಯಾಗಿ ಇದ್ದರು. ಅಂದು ಅವರು ಅಪ್ರಾಪ್ತರಾಗಿದ್ದ ಕಾರಣ 1976ರ ಮೇ ತಿಂಗಳಲ್ಲಿ ಬಿಡುಗಡೆಯಾದರು.
ಜೈಲಿನಿಂದ ಹೊರಬಂದ ನಂತರವೂ ರಾಮು ನಾಯ್ಕರು ಹೋರಾಟಗಳಿಂದ ಹಿಂದೆ ಸರಿಯಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜನಸಂಘದ ಕಾರ್ಯ ಮುಂದುವರಿಯಿತು. 1977ರಲ್ಲಿ ಯಲ್ಲಾಪುರದಲ್ಲಿ ಜನತಾ ಪಕ್ಷ ಸ್ಥಾಪನೆಯಾದಾಗ ಅದರಲ್ಲೂ ಸಕ್ರಿಯವಾಗಿ ಪಾಲ್ಗೊಂಡರು. 1980ರಲ್ಲಿ ಭಾರತೀಯ ಜನತಾ ಪಾರ್ಟಿಯ ಉದಯವಾದಾಗ ಪಕ್ಷದ ಹಿರಿಯರ ಸಲಹೆಯ ಮೇರೆಗೆ ಸ್ಥಳೀಯ ಖಾದಿ ಗ್ರಾಮೋದ್ಯೋಗ ಕೇಂದ್ರದ ವ್ಯವಸ್ಥಾಪಕರ ಹುದ್ದೆಗೆ ರಾಜಿನಾಮೆ ನೀಡಿ ಪಕ್ಷದ ಪೂರ್ಣಾವಧಿಯ ಕಾರ್ಯಕರ್ತರಾದರು.
1983ರಿಂದ 1992ರವರೆಗೆ ಯಲ್ಲಾಪುರ ತಾಲೂಕು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮುಂದೆ ತಾಲೂಕು ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ, ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಗಳನ್ನೂ ನಿರ್ವಹಿಸಿದರು.
1994ರಲ್ಲಿ ಯಲ್ಲಾಪುರ ತಾಲೂಕನ್ನೊಳಗೊಂಡ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಹಾಗೂ 1996ರಲ್ಲಿ ಯಲ್ಲಾಪುರ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ರಾಮು ನಾಯ್ಕ ಶ್ರಮಿಸಿದರು.
ಅಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಶಿವರಾಮ ಹೆಬ್ಬಾರ ಅವರೊಂದಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ರಾಜ್ಯ ಸಮಿತಿಯ ಸದಸ್ಯರಾಗಿ ಎರಡು ಬಾರಿ ಹಾಗೂ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವುದು ಅವರ ದೀರ್ಘ ಸಂಘಟನಾ ಪಯಣದ ಭಾಗ.
ಆದರೆ ರಾಮು ನಾಯ್ಕ ಅವರ ಸಾರ್ವಜನಿಕ ಬದುಕನ್ನು ಪಕ್ಷದ ಜವಾಬ್ದಾರಿಗಳಲ್ಲಷ್ಟೇ ಸೀಮಿತಗೊಳಿಸಲಾಗದು. ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅವರು, ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಳೆದ 18 ವರ್ಷಗಳಿಂದ ತೊಡಗಿಸಿಕೊಂಡು ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸಾರಿಗೆ, ಮೂಲಸೌಕರ್ಯ ಸೇರಿದಂತೆ ಯಲ್ಲಾಪುರದ ಹಲವು ಬೇಡಿಕೆಗಳ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಕ್ಕಾಗಿ ಹೋರಾಟ ನಡೆಸಿ ಅನುದಾನ ದೊರಕಿಸುವ ಪ್ರಯತ್ನದಿಂದ ಹಿಡಿದು, ಯಲ್ಲಾಪುರದಲ್ಲಿ ಸರ್ಕಾರಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಆರಂಭಿಸಲು ನಡೆಸಿದ ಸಂಘಟಿತ ಹೋರಾಟದವರೆಗೆ ಹಲವು ವಿಚಾರಗಳಲ್ಲಿ ಅವರ ಪಾತ್ರವಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸ್ವಂತ ಕಟ್ಟಡ, ಕುಡಿಯುವ ನೀರಿನ ಯೋಜನೆ, ಅಗ್ನಿಶಾಮಕ ಘಟಕ ಸೇರಿದಂತೆ ಮೂಲಸೌಕರ್ಯಗಳಿಗಾಗಿ ಅವರು ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾರೆ.
2004ರಲ್ಲಿ ಕದಂಬ ಸಂಸ್ಥೆಯ ಮೂಲಕ ಯಲ್ಲಾಪುರದಲ್ಲಿ ಕದಂಬ ಧರ್ಮಾರ್ಥ ಆಸ್ಪತ್ರೆ ಹಾಗೂ ಖಾಸಗಿ ಅಂಬುಲೆನ್ಸ್ ಸೇವೆ ಆರಂಭಿಸುವ ಪ್ರಯತ್ನದಲ್ಲೂ ಅವರು ತೊಡಗಿಸಿಕೊಂಡಿದ್ದರು. ಶಿಕ್ಷಣ ಮತ್ತು ಆರೋಗ್ಯದ ಜೊತೆಗೆ ನಗರದ ಪರಿಸರ ಹಾಗೂ ಸಂಚಾರದ ಸಮಸ್ಯೆಗಳೂ ಅವರ ಹೋರಾಟದ ಭಾಗವಾಗಿವೆ.
2012ರಲ್ಲಿ ಮ್ಯಾಂಗನೀಸ್ ಲಾರಿಗಳ ಸಂಚಾರದಿಂದ ಯಲ್ಲಾಪುರದಲ್ಲಿ ಉಂಟಾಗಿದ್ದ ಸಮಸ್ಯೆಯ ವಿರುದ್ಧ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ನಡೆಸಿದ ‘ಯಲ್ಲಾಪುರ ಉಳಿಸಿ’ ಚಳವಳಿ ಅವರ ಸಾಮಾಜಿಕ ಹೋರಾಟದ ಪ್ರಮುಖ ಅಧ್ಯಾಯಗಳಲ್ಲಿ ಒಂದು. ಇದೇ ರೀತಿ ಅಂಕೋಲಾ–ಹುಬ್ಬಳ್ಳಿ ರೈಲು ಯೋಜನೆ, ಉತ್ತರ ಕನ್ನಡ ವಿಭಜನೆಯಾದರೆ ಘಟ್ಟದ ಮೇಲಿನ ಭಾಗಕ್ಕೆ ಯಲ್ಲಾಪುರ ಜಿಲ್ಲೆ ರಚನೆ, ಯಲ್ಲಾಪುರದಲ್ಲಿ 24/7 ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ನಗರದ ಮೂಲಕ ಅಪಾಯಕಾರಿ ಲೋಡ್ ಟ್ಯಾಂಕರ್ಗಳ ಸಂಚಾರ ನಿಯಂತ್ರಣ ಹಾಗೂ ಬೈಪಾಸ್ ರಸ್ತೆ ಸೇರಿದಂತೆ ಹಲವು ಬೇಡಿಕೆಗಳ ಪರವೂ ಅವರು ಹೋರಾಟ ನಡೆಸಿದ್ದಾರೆ.
ಈ ಎಲ್ಲ ಹೋರಾಟಗಳಲ್ಲಿ ಪ್ರತಿಯೊಂದೂ ಯಶಸ್ವಿಯಾಗಿದೆ ಎಂದು ಹೇಳುವುದು ಸರಿಯಲ್ಲ. ಕೆಲವು ಬೇಡಿಕೆಗಳು ಈಡೇರಿವೆ, ಕೆಲವು ಇನ್ನೂ ಹೋರಾಟದ ಹಂತದಲ್ಲಿವೆ. ಆದರೆ ಸಾರ್ವಜನಿಕ ಬದುಕಿನಲ್ಲಿ ಸಮಸ್ಯೆ ಕಂಡಾಗ ಅದರ ಬಗ್ಗೆ ಧ್ವನಿ ಎತ್ತುವುದು, ಜನರನ್ನು ಸಂಘಟಿಸುವುದು ಮತ್ತು ಆಡಳಿತದ ಗಮನ ಸೆಳೆಯುವುದು ಅವರ ಕಾರ್ಯಶೈಲಿಯ ಪ್ರಮುಖ ಭಾಗವಾಗಿ ಬೆಳೆದಿದೆ.
ಇದರ ನಡುವೆ ಶಿಕ್ಷಣ ಸಂಸ್ಥೆಗಳ ಎಸ್ಡಿಎಂಸಿ, ಕಾಲೇಜು ಅಭಿವೃದ್ಧಿ ಸಮಿತಿಗಳು, ವಿವಿಧ ಸಾಮಾಜಿಕ ಹಾಗೂ ಸಮುದಾಯ ಸಂಘಟನೆಗಳಲ್ಲಿಯೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಯಲ್ಲಾಪುರ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನಗಳಲ್ಲೂ ಸಕ್ರಿಯರಾಗಿದ್ದಾರೆ.
17ನೇ ವಯಸ್ಸಿನಲ್ಲಿ ಸಾರ್ವಜನಿಕ ಹಿತದ ಉದ್ದೇಶಕ್ಕಾಗಿಯೇ ಜೈಲಿನ ಮೆಟ್ಟಿಲು ಹತ್ತಿದ ಯುವಕನೊಬ್ಬ, ಐದು ದಶಕಗಳ ನಂತರವೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ ಎನ್ನುವುದೇ ರಾಮು ನಾಯ್ಕ ಅವರ ಬದುಕಿನ ಮುಖ್ಯ ಕಥೆ. ಅವರ ರಾಜಕೀಯ ನಿಲುವುಗಳನ್ನು ಒಪ್ಪುವವರು, ಒಪ್ಪದವರು ಇರಬಹುದು. ಆದರೆ ಯಲ್ಲಾಪುರದ ಸಾರ್ವಜನಿಕ ಬದುಕಿನ ಹಲವು ಹೋರಾಟಗಳೊಂದಿಗೆ ಅವರ ಹೆಸರು ದೀರ್ಘಕಾಲದಿಂದ ಬೆಸೆದುಕೊಂಡಿರುವುದನ್ನು ಯಾರೊಬ್ಬರೂ ನಿರಾಕರಿಸಲಾಗದು.
ಆಗಸ್ಟ್ 31ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ರಾಮು ಹೊನ್ನಪ್ಪ ನಾಯ್ಕ ಅವರಿಗೆ ಜನ್ಮದಿನದ ಶುಭಾಶಯಗಳು. 56 ವರ್ಷಗಳಿಂದ ಹೋರಾಟದ ದಾರಿಯಲ್ಲಿ ಸಾಗಿದ ಅವರ ಬದುಕು, ಸಾರ್ವಜನಿಕ ಬದುಕಿನಲ್ಲಿ ಸಮಸ್ಯೆ ಕಂಡಾಗ ‘ನಮ್ಮಿಂದ ಏನಾದರೂ ಸಾಧ್ಯವೇ?’ ಎಂದು ಪ್ರಶ್ನಿಸುವ ಪ್ರತಿಯೊಬ್ಬರಿಗೂ ಒಂದು ನೆನಪು. ಬದಲಾವಣೆ ದೊಡ್ಡ ಹೆಜ್ಜೆಯಿಂದಲೇ ಆರಂಭವಾಗಬೇಕೆಂದಿಲ್ಲ. ಕೆಲವೊಮ್ಮೆ ಅದು 17 ವರ್ಷದ ಯುವಕನೊಬ್ಬನ ಮೊದಲ ಧೈರ್ಯದ ಹೆಜ್ಜೆಯಿಂದಲೂ ಆರಂಭವಾಗಬಹುದು!