ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ನಗರ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಣೇಶನಗರದ ಪುಟ್ಟನಮನೆ ರಸ್ತೆ ನಿವಾಸಿ ಕೃಷ್ಣ ದುರ್ಗಪ್ಪ ಹವಣೂರ (36) ಪ್ರಕರಣದ ಆರೋಪಿಯಾಗಿದ್ದಾನೆ.
ಆ.24ರಂದು ಸಂಜೆ 7.40ರ ಸುಮಾರಿಗೆ ಶಿರಸಿ ನಗರದ ಲಿಂಗದಕೋಣ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಕೃಷ್ಣ ಹವಣೂರ ಓಡಾಡುವ ಜನರಿಗೆ ಒಂದು ರೂಪಾಯಿಗೆ 80 ರೂ ನೀಡುವುದಾಗಿ ಹೇಳಿ, ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆತನಿಂದ 635 ರೂ ನಗದು, ಓಸಿ ಅಂಕೆ-ಸಂಖ್ಯೆ ಬರೆದ ಒಂದು ಚೀಟಿ ಹಾಗೂ ಒಂದು ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನರಸಿಂಹಲು ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.