ಯಲ್ಲಾಪುರ: ರೈತರ ತೋಟದಲ್ಲಿನ ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದಿರುವುದನ್ನು ಖಂಡಿಸಿರುವ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಅಡಿಕೆ ಮರ ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಯಾರೂ ಕೊಟ್ಟಿಲ್ಲ. ಮರಗಳನ್ನು ಉಳಿಸಿ ಬೆಳೆಸುವುದು ಅರಣ್ಯ ಇಲಾಖೆಯ ಕರ್ತವ್ಯವೇ ಹೊರತು ಮರ ಕಡಿಯುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಂಬೆ ಗ್ರಾಮದ ಸದಾಶಿವ ನಾಯ್ಕ ಅವರ ತೋಟಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿದಿರುವ ಸ್ಥಳವನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಸದಾಶಿವ ನಾಯ್ಕ ಅವರು ಸುಮಾರು 50 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕೃಷಿಯೇ ಅವರ ಜೀವನಾಧಾರ. ಅವರ ತೋಟದಲ್ಲಿದ್ದ ಸುಮಾರು 6ರಿಂದ 7 ವರ್ಷ ವಯಸ್ಸಿನ 40 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದಾರೆ ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದರು.
ಸದಾಶಿವ ನಾಯ್ಕ ಅವರು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿಗಳು ತೋಟಕ್ಕೆ ಬಂದು ಅಡಿಕೆ ಮರಗಳನ್ನು ಕಡಿದಿದ್ದಾರೆ. ಇದರಿಂದ ರೈತ ತೀವ್ರವಾಗಿ ನೊಂದಿದ್ದು, ಕಣ್ಣೀರು ಹಾಕುವಂತಾಗಿದೆ ಎಂದು ಅವರು ಹೇಳಿದರು.
ಸದಾಶಿವ ನಾಯ್ಕ ಅವರು ಹತ್ತಾರು ಎಕರೆ ಜಮೀನು ಹೊಂದಿರುವ ಶ್ರೀಮಂತರಲ್ಲ. ನಿನ್ನೆ-ಮೊನ್ನೆಯಿಂದ ಕೃಷಿ ಮಾಡುತ್ತಿರುವವರೂ ಅಲ್ಲ. ಹಲವು ವರ್ಷಗಳಿಂದ ಇದೇ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ರೈತರ ಬಗ್ಗೆ ಅರಣ್ಯ ಇಲಾಖೆ ಕನಿಷ್ಠ ಕನಿಕರವನ್ನಾದರೂ ಹೊಂದಿರಬೇಕು ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ರೈತನ ತೋಟದಲ್ಲಿರುವ ಮರಗಳನ್ನು ಕಡಿದು ಹಾಕುವ ಅಧಿಕಾರವನ್ನು ಅರಣ್ಯ ಇಲಾಖೆಗೆ ಯಾರೂ ನೀಡಿಲ್ಲ. ಮರ ಕಡಿಯಲು ಅರಣ್ಯ ಇಲಾಖೆಯ ಯಾವ ನಿಯಮ ಅವಕಾಶ ನೀಡುತ್ತದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುವ ಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಸದಾ ಅವರ ಪರವಾಗಿ ನಿಲ್ಲಲಿದೆ ಎಂದು ಅನಂತಮೂರ್ತಿ ಹೆಗಡೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ, ಮಾಳಕೊಪ್ಪ–ಮಂಚಿಕೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಬಾಬಣ್ಣ ಪತ್ರಕರ್, ರಾಮಕೃಷ್ಣ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೀತಾರಾಮ ಗೌಡ, ಭರಣಿ ಬೂತ್ ಅಧ್ಯಕ್ಷ ಗಂಗಾಧರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.