ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಮಂಗಳವಾರ ಅಧಿಕೃತ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ತಮ್ಮ ನಿವಾಸದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಂದ (ಬಿಎಲ್‌ಒ) ಪ್ರಿ-ಫಿಲ್ಡ್ ಎನ್ಯುಮರೇಷನ್ ಫಾರಂ ಸ್ವೀಕರಿಸಿ, ಮತದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿದರು.
ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರೂ ಬಿಎಲ್‌ಒಗಳು ಮನೆಗೆ ತಂದು ನೀಡುವ ಎನ್ಯುಮರೇಷನ್ ಫಾರಂ ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ, ಘೋಷಣೆ (ಡಿಕ್ಲರೇಷನ್) ಓದಿ ಸಹಿ ಹಾಗೂ ದಿನಾಂಕ ನಮೂದಿಸಿ ವಾಪಸ್ ನೀಡಬೇಕು ಎಂದು ತಿಳಿಸಿದರು.
ಫಾರಂ ಸಂಗ್ರಹಿಸಲು ಅಧಿಕಾರಿಗಳು ಮೂರು ಬಾರಿ ಮನೆಗಳಿಗೆ ಭೇಟಿ ನೀಡಲಿದ್ದು, ಸಂಬಂಧಪಟ್ಟ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಅವರ ಪರವಾಗಿ ಕುಟುಂಬದ ಸದಸ್ಯರು ಅಥವಾ ರಕ್ತ ಸಂಬಂಧಿಗಳು ಸಹಿ ಮಾಡಿ ಫಾರಂ ಸಲ್ಲಿಸಬಹುದಾಗಿದೆ ಎಂದರು.
ಸಲ್ಲಿಕೆಯಾದ ಫಾರಂಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಬಳಿಕ ಕರಡು ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ, ಹೆಸರು ಸೇರ್ಪಡೆ ಅಥವಾ ಕೈಬಿಡುವಿಕೆ ಕುರಿತಂತೆ ಸಾರ್ವಜನಿಕರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಾದ್ಯಂತ ಮತದಾರರ ನೆರವು ಕೇಂದ್ರಗಳು ಹಾಗೂ ಬಿಎಲ್‌ಒ ಫೆಸಿಲಿಟೇಶನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾವುದೇ ಮಾಹಿತಿ ಅಥವಾ ದೂರುಗಳಿಗಾಗಿ ಉಚಿತ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ದಿನಕರ ಶೆಟ್ಟಿ ಹಾಗೂ ಶಿವರಾಮ ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರ ನಿವಾಸಗಳಿಗೆ ಬಿಎಲ್‌ಒಗಳು ಹಾಗೂ ತಹಸೀಲ್ದಾರರು ಭೇಟಿ ನೀಡಿ ಎನ್ಯುಮರೇಷನ್ ಫಾರಂ ವಿತರಿಸಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಗಣ್ಯರು, ಶತಾಯುಷಿಗಳು ಸೇರಿದಂತೆ ಪ್ರತಿಯೊಬ್ಬ ಮತದಾರರ ಮನೆಗೆ ಎನ್ಯುಮರೇಷನ್ ಫಾರಂ ವಿತರಿಸುವ ಕಾರ್ಯಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.