ಶಿರಸಿ: ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಪಾರ್ಕಿಂಗ್ ಲೈಟ್ ಇಲ್ಲದೆ ರಸ್ತೆ ಮಧ್ಯೆ ನಿಲ್ಲಿಸಿದ್ದ ಲಗೇಜ್ ರಿಕ್ಷಾಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶಿರಸಿ-ಬನವಾಸಿ ರಸ್ತೆಯ ಸರ್ಕಾರಿ ಪದವಿ ಕಾಲೇಜು ಸಮೀಪ ನಡೆದಿದೆ.
ಗಾಯಾಳುವನ್ನು ರಾಮನಬೈಲಿನ ಪ್ರವೀಣ ಚಿದಾನಂದ ಆಚಾರಿ ಎಂದು ಗುರುತಿಸಲಾಗಿದೆ.
ಜೂನ್ 29ರಂದು ರಾತ್ರಿ ಸುಮಾರು 8.45ಕ್ಕೆ ಪ್ರವೀಣ ಅವರು ತಮ್ಮ ಬೈಕ್‌ನಲ್ಲಿ ಬನವಾಸಿಯಿಂದ ಶಿರಸಿಯತ್ತ ಬರುತ್ತಿದ್ದರು. ಈ ವೇಳೆ ಮಳೆಯಾಗುತ್ತಿದ್ದರೂ, ಕಲ್ಮನೆಯ ಗಣಪತಿ ದತ್ತಾತ್ರೇಯ ನಾಯ್ಕ ಅವರು ತಮ್ಮ ಲಗೇಜ್ ರಿಕ್ಷಾವನ್ನು ಯಾವುದೇ ಸೂಚನಾ ಫಲಕ ಅಥವಾ ಪಾರ್ಕಿಂಗ್ ಲೈಟ್ ಹಾಕದೆ ರಸ್ತೆಯಲ್ಲಿ ನಿಲ್ಲಿಸಿದ್ದರು.
ಕತ್ತಲೆ ಹಾಗೂ ಮಳೆಯ ಹಿನ್ನೆಲೆಯಲ್ಲಿ ರಿಕ್ಷಾ ನಿಂತಿರುವುದನ್ನು ಗಮನಿಸದೇ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪ್ರವೀಣ ಅವರ ತಲೆಗೆ ಗಂಭೀರ ಗಾಯಗಳಾಗಿವೆ.
ಈ ಸಂಬಂಧ ಗಾಯಾಳುವಿನ ಸಹೋದರ ಪರುಶುರಾಮ ಚಿದಾನಂದ ಆಚಾರಿ ನೀಡಿದ ದೂರಿನ ಮೇರೆಗೆ ಲಗೇಜ್ ರಿಕ್ಷಾ ಚಾಲಕ ಗಣಪತಿ ದತ್ತಾತ್ರೇಯ ನಾಯ್ಕ (42) ವಿರುದ್ಧ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.