Friday, July 24, 2026
Join WhatsApp Group
HomeLocal Newsಶಿರಸಿ | ರಸ್ತೆ ನಿರ್ಮಿಸದ ಪ್ರಾಧಿಕಾರಕ್ಕೆ ʻಓಂ ಶಾಂತಿʼ!

ಶಿರಸಿ | ರಸ್ತೆ ನಿರ್ಮಿಸದ ಪ್ರಾಧಿಕಾರಕ್ಕೆ ʻಓಂ ಶಾಂತಿʼ!

ಶಿರಸಿ: ಹದಗೆಟ್ಟ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಗೆ ಬೇಸತ್ತು ಶಿರಸಿಯ ಜನತೆ ಮಂಗಳವಾರ ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದರು. ಬಿಸಲಕೊಪ್ಪ ಬಳಿಯಲ್ಲಿ ಹೆದ್ದಾರಿ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಿ, ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ, ಹೆದ್ದಾರಿ ಕಾಮಗಾರಿಯಲ್ಲಿನ ನಿಧಾನಗತಿ ಹಾಗೂ ಅವೈಜ್ಞಾನಿಕ ನಿರ್ವಹಣೆಯನ್ನು ಖಂಡಿಸಿದರು. ‘ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ’ ಎಂಬ ಕಟೌಟ್‌ ನಿಲ್ಲಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ತೀವ್ರ ಬಿಸಿಲಿನ ನಡುವೆಯೂ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸಮಸ್ಯೆಯ ಗಂಭೀರತೆಯನ್ನು ಸ್ಪಷ್ಟಪಡಿಸಿತು.

ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎಲ್ಲಾ ವಾಹನಗಳನ್ನು ತಡೆದು, ತಮ್ಮ ಬೇಡಿಕೆಗಳಿಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಬಿಸಲಕೊಪ್ಪ ಸರ್ಕಲ್‌ನಲ್ಲಿ ‘ಬದುಕಿಗಾಗಿ ಹೋರಾಟ’ ಎಂದು ಘೋಷಣೆ ಕೂಗಿ, ವಾಹನ ಸವಾರರ ಬೆಂಬಲ ಕೋರಿದರು. ಅನೇಕ ವಾಹನ ಸವಾರರು ಕೂಡ ಸ್ವಯಂಪ್ರೇರಿತವಾಗಿ ಪ್ರತಿಭಟನೆಯನ್ನು ಬೆಂಬಲಿಸಿ, ರಸ್ತೆ ದುಸ್ಥಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆಗಳು ಕೇಳಿಬಂದವು. ಶಾಸಕ ಹಾಗೂ ಸಂಸದರ ನಿರ್ಲಕ್ಷ್ಯವನ್ನು ಖಂಡಿಸಿದ ಜನರು, ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಕಿಡಿಕಾರಿದರು. ಇದೇ ವೇಳೆ, ಕಿಲೋಮೀಟರ್‌ಗಳಷ್ಟು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಯಿತು. ಶಿರಸಿ-ಬಿಸಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ಲಾರಿ, ಟಿಪ್ಪರ್ ಹಾಗೂ ಬಸ್ಸುಗಳನ್ನು ಮಳಗಿ–ದಾಸನಕೊಪ್ಪ–ಬನವಾಸಿ ಮಾರ್ಗವಾಗಿ ಸಂಚರಿಸಲು ಸೂಚನೆ ನೀಡಲಾಯಿತು. ಹಾವೇರಿ ಕಡೆಯಿಂದ ಬರುವ ವಾಹನಗಳಿಗೂ ಇದೇ ಮಾರ್ಗವನ್ನು ಬಳಸುವಂತೆ ತಿಳಿಸಲಾಯಿತು.

ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ, ಅದು ಫಲಕಾರಿಯಾಗಲಿಲ್ಲ.

ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದ್ದರೂ, ಬೇಡಿಕೆಗಳು ಈಡೇರದಿದ್ದಲ್ಲಿ ಮತ್ತೊಮ್ಮೆ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ಜನ ಎಚ್ಚರಿಕೆ ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share