ಹಾನಗಲ್: ವಿಷಪೂರಿತ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಜನರ ಜೀವ ರಕ್ಷಣೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಕಾತೂರು ವಲಯ, ಪಾಳ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರನ್ನು ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಸನ್ಮಾನಿಸಿ ಗೌರವಿಸಿದರು.
ಹಾನಗಲ್ ನಗರದ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ನಾಗೇಂದ್ರ ಶಿವ ಅವರ ಉಪಸ್ಥಿತಿಯಲ್ಲಿ ಸನ್ಮಾನ ನೆರವೇರಿತು.
ಮುಂಡಗೋಡ, ಶಿರಸಿ ಹಾಗೂ ಹಾನಗಲ್ ತಾಲೂಕುಗಳ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಂದ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿಷಪೂರಿತ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಜನರ ಜೀವ ಉಳಿಸುವ ಕಾರ್ಯವನ್ನು ಸುನೀಲ್ ಹೊನ್ನಾವರ ಹಲವು ವರ್ಷಗಳಿಂದ ನಿರಂತರವಾಗಿ ನಿರ್ವಹಿಸುತ್ತಿದ್ದಾರೆ.
ಅವರ ಈ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದ ಶಾಸಕ ಶ್ರೀನಿವಾಸ ಮಾನೆ, ನಿಮ್ಮ ಸೇವೆ ಇದೇ ರೀತಿ ನಿರಂತರವಾಗಿ ಮುಂದುವರಿಯಲಿ. ಸಮಾಜಕ್ಕಾಗಿ ಸಲ್ಲಿಸುತ್ತಿರುವ ಈ ಕಾರ್ಯಕ್ಕೆ ಸರ್ಕಾರದಿಂದಲೂ ಉನ್ನತ ಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಸುನೀಲ್ ಹೊನ್ನಾವರ ಅವರ ಸೇವೆಯನ್ನು ಅಭಿನಂದಿಸಿದರು.