ಸಿದ್ದಾಪುರ: ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿದಂಟಕಲ್ ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಅಡಿಕೆ ಬೆಳೆಗಾರರಾದ ವಿನಾಯಕ ಹೆಗಡೆ ಅವರಿಗೆ ಭಾರೀ ನಷ್ಟ ಉಂಟಾಗಿದೆ. ಅವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 70ಕ್ಕೂ ಹೆಚ್ಚು ಚೀಲ ಸಿಪ್ಪೆ ಅಡಿಕೆ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಹಾನಿಯನ್ನು ಪರಿಶೀಲಿಸಿ, ಸಂತ್ರಸ್ತ ರೈತನಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಈಗಾಗಲೇ ಎಲೆ ಚುಕ್ಕಿ ರೋಗ ಹಾಗೂ ಕೊಳೆ ರೋಗದ ಪರಿಣಾಮ ಜಿಲ್ಲೆಯ ಹಲವು ಭಾಗಗಳಲ್ಲಿ ಅಡಿಕೆ ಬೆಳೆ ತೀವ್ರ ಹಾನಿಗೊಳಗಾಗಿದ್ದು, ಶೇ.50ರಿಂದ 60ರಷ್ಟು ಇಳುವರಿ ಕುಸಿದಿದೆ. ಇಂತಹ ಸಂಕಷ್ಟದ ನಡುವೆ ಆಕಸ್ಮಿಕ ಅಗ್ನಿ ಅವಘಡದಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣ ವಿಶೇಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ನಿಂತು, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅಗ್ನಿ ಅವಘಡದಿಂದ ಹಾನಿಗೊಳಗಾದ ರೈತನಿಗೆ ವಿಶೇಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಂತ್ರಸ್ತ ರೈತ ವಿನಾಯಕ ಹೆಗಡೆ ಮಾತನಾಡಿ, ಬೆಂಕಿ ಅವಘಡದಿಂದ ಸುಮಾರು ಶೇ.90ರಷ್ಟು ಅಡಿಕೆ ನಾಶವಾಗಿದ್ದು, ಅಂದಾಜು 4 ಲಕ್ಷ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ. ಘಟನೆಯಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.