ಕುಟುಂಬ ಸದಸ್ಯರಲ್ಲಿ ಸೋಂಕು ಪತ್ತೆಯಾಗಿಲ್ಲ; ಆತಂಕ ಬೇಡ
ಯಲ್ಲಾಪುರ: ತಾಲೂಕಿನ ಚವತ್ತಿ ಗ್ರಾಮದಲ್ಲಿ ಇನ್ಫ್ಲುಯೆಂಜಾ-ಎ (ಹಂದಿಜ್ವರ) ಸೋಂಕಿಗೆ ತುತ್ತಾಗಿ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ರಾಜು ಮಂಜಾ ಗೌಡ (41) ಎಂದು ಗುರುತಿಸಲಾಗಿದೆ.
ಲಭ್ಯ ಮಾಹಿತಿಯಂತೆ, ಜೂನ್ 10ರಂದು ರಾಜು ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಮ್ಮಚಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಬಳಿಕ ಜೂನ್ 12ರಂದು ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಜೂನ್ 16ರಂದು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರ ಸಲಹೆಯಂತೆ ಜೂನ್ 17ರಂದು ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆಯಲ್ಲಿ ಅವರಿಗೆ ಇನ್ಫ್ಲುಯೆಂಜಾ-ಎ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 21ರಂದು ಮೃತಪಟ್ಟಿದ್ದಾರೆ.
ಸೋಂಕಿನ ಹಿನ್ನೆಲೆಯಲ್ಲಿ ಮೃತರ ಕುಟುಂಬ ಸದಸ್ಯರನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಯಾರಲ್ಲೂ ಸೋಂಕಿನ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ಗ್ರಾಮದಲ್ಲಿ ಸೋಂಕು ಹರಡುವ ಆತಂಕ ಸದ್ಯಕ್ಕೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ಫ್ಲುಯೆಂಜಾ-ಎ ವೈರಸ್ ಉಸಿರಾಟದ ವ್ಯವಸ್ಥೆಯನ್ನು ಬಾಧಿಸುವ ಸಾಂಕ್ರಾಮಿಕ ಸೋಂಕಾಗಿದ್ದು, ತೀವ್ರ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ತಲೆನೋವು, ಮೈಕೈ ನೋವು, ಸುಸ್ತು ಹಾಗೂ ಉಸಿರಾಟದ ತೊಂದರೆ ಇದರ ಪ್ರಮುಖ ಲಕ್ಷಣಗಳಾಗಿವೆ. ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.
ಈ ಘಟನೆ ಯಲ್ಲಾಪುರ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು, ಗಂಟಲು ನೋವು, ಉಸಿರಾಟದ ತೊಂದರೆ ಅಥವಾ ಅತಿಯಾದ ಸುಸ್ತು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಉಸಿರಾಟದ ತೊಂದರೆ, ಎದೆನೋವು, ನಿರ್ಜಲೀಕರಣ ಅಥವಾ ಗೊಂದಲದಂತಹ ಲಕ್ಷಣಗಳು ಕಂಡುಬಂದರೆ ತುರ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸಲಹೆ ನೀಡಲಾಗಿದೆ.