ದಾಂಡೇಲಿ: ಟಿಪ್ಪರ್ ಲಾರಿಯನ್ನು ಖರೀದಿಸುವುದಾಗಿ ನಂಬಿಸಿ ಮುಂಗಡ ಹಣ ನೀಡಿ ವಾಹನವನ್ನು ತೆಗೆದುಕೊಂಡು ಹೋಗಿ, ಉಳಿದ ಹಣ ಪಾವತಿಸದೇ ವಾಹನವನ್ನೂ ಹಿಂತಿರುಗಿಸದೆ ವಂಚಿಸಿರುವ ಆರೋಪದಡಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ನಾಶೀರ್ ಇಸ್ಮಾಯಿಲ್ ಮುಲ್ಲಾ ಅವರ ದೂರಿನ ಪ್ರಕಾರ, 2024ರ ಅಕ್ಟೋಬರ್ 31ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಆರೋಪಿತರಾದ ಸಾಹೇಬಲಾಲ್ ರಸೂಲ್‌ಸಾಬ್ ಶೇಖ್ ಪುತ್ರ ಹಾಗೂ ಮತ್ತೊಬ್ಬ ಚಾಲಕ ದಾಂಡೇಲಿಯ ಟೌನ್‌ಶಿಪ್ ಪೌಜಲ್ ಮಸೀದಿ ಸಮೀಪದ ಮನೆಗೆ ಬಂದು, ಅವರ ಕೆಎ-05 AA-7142 ಸಂಖ್ಯೆಯ 10 ಚಕ್ರಗಳ ಅಶೋಕ್ ಲೇಲ್ಯಾಂಡ್ ಟಿಪ್ಪರ್ ವಾಹನವನ್ನು ಖರೀದಿಸುವುದಾಗಿ ತಿಳಿಸಿದ್ದಾರೆ.
₹5 ಲಕ್ಷಕ್ಕೆ ವಾಹನ ಖರೀದಿಸುವ ಒಪ್ಪಂದ ಮಾಡಿಕೊಂಡ ಆರೋಪಿತರು, ವಾಹನ ಬೈಲಹೊಂಗಲದಲ್ಲಿದ್ದ ಕಾರಣ ಅಲ್ಲಿಗೆ ತೆರಳಿ ₹80,000 ಮುಂಗಡ ಹಣ ನೀಡಿ, ಉಳಿದ ಹಣವನ್ನು ಬಳಿಕ ಪಾವತಿಸುವುದಾಗಿ ಹೇಳಿ ಒಪ್ಪಂದ ಮಾಡಿಕೊಂಡು ವಾಹನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಆದರೆ ಒಪ್ಪಂದದ ಅವಧಿ ಮುಗಿದರೂ ಉಳಿದ ಹಣವನ್ನು ನೀಡದೇ, ವಾಹನವನ್ನೂ ಹಿಂತಿರುಗಿಸದೆ ನಂಬಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.