Friday, July 24, 2026
Join WhatsApp Group
HomeLocal Newsಅಡವಿಯ ನಡುವೆ 'ತೂಗು ತೊಟ್ಟಿಲು'

ಅಡವಿಯ ನಡುವೆ ‘ತೂಗು ತೊಟ್ಟಿಲು’

ದಟ್ಟ ಕಾನನದಲ್ಲಿ ಅಡವಿ ಮಕ್ಕಳ ಕಲರವ

ವಿಶೇಷ ವರದಿ: ದಿನೇಶ್ ಹೊಳ್ಳ.

ಯಲ್ಲಾಪುರ: ಅದೊಂದು ದಟ್ಟ ಅಡವಿ. ಅಡವಿಯ ಹಾಡಿಯಲ್ಲಿ ಸದಾ ಹಾಡು ಮತ್ತು ಗೆಜ್ಜೆ ನಾದಗಳು. ವನದ ಮೌನದೊಂದಿಗೆ ಒಂದಷ್ಟು ಮನಗಳ ಸಾಂಸ್ಕೃತಿಕ ಧ್ಯಾನಗಳು. ಹಾಡು, ನೃತ್ಯ, ಸಂಗೀತ, ರಂಗಭೂಮಿಯ ನಿನಾದಗಳು ಅಡವಿಯಲ್ಲಿ ಪ್ರತಿಧ್ವನಿಗಳಾಗುತ್ತವೆ.  ಅಲ್ಲಿನ ಮರ-ಗಿಡಗಳು ಸದಾ ಮೌನವಾಗಿ ಸಂಗೀತದ ಆಲಾಪನೆಗಳಾಗುತ್ತವೆ.

ಇದು ಯಲ್ಲಾಪುರದ ಮಂಚಿಕೇರಿಯ ಅಣಲೇಸರ ಮತ್ತು ದೇವರಕಲ್ಲಳ್ಳಿಯ ಮನೆಗಳ ಕಲರವ, ಸಿದ್ದಿ ಟ್ರಸ್ಟ್ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ಆಯೋಜಿಸುವ ಶಿಬಿರದ ಅಲೆ. ಮಂಚಿಕೇರಿಯ ಬಾಬು ಸಿದ್ದಿ ಹಲವು ವರ್ಷಗಳ ಹಿಂದೆಯೇ ರಂಗಭೂಮಿಯಲ್ಲಿ ಗುರುತಿಸಲ್ಪಟ್ಟವರು. ನಂತರ ಅವರ ಮಕ್ಕಳಾದ ಗಿರಿಜಾ ಸಿದ್ದಿ, ಗಿರೀಶ್ ಸಿದ್ದಿ, ಡಾ. ಗೀತಾ ಸಿದ್ದಿಯವರು ರಂಗಭೂಮಿ, ನಾಟಕ, ಚಲನಚಿತ್ರ ಕ್ಷೇತ್ರದಲ್ಲಿ ಖ್ಯಾತಿ ಪಡೆದವರು.

ಇವರೆಲ್ಲಾ ಸೇರಿ ಪ್ರತೀ ವರ್ಷ ದೇವರಕಲ್ಲಳ್ಳಿಯಲ್ಲಿ ಅಡವಿಯ ನಡುವೆ ಮಕ್ಕಳ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ಈ ವರ್ಷವೂ ಇತ್ತೀಚೆಗೆ 12 ದಿನಗಳ ‘ತೂಗು ತೊಟ್ಟಿಲು’ ಎಂಬ ಶಿಬಿರವನ್ನು ಆಯೋಜಿಸಿದ್ದು, ಸುಮಾರು 40 ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೆ.

 ಬೇರೆಲ್ಲಾ ಕಡೆ ಕಮ ರ್ಶಿಯಲ್ ಶಿಬಿರಗಳು ನಡೆಯುತ್ತಿರುವಾಗ ಇದು ಸoಪೂರ್ಣ ಉಚಿತವಾಗಿಯೇ ನಡೆಯುವ ಶಿಬಿರ. ಇಲ್ಲಿ ಪ್ರತೀ ದಿನವೂ ಮಕ್ಕಳಿಗೆ ಹಾಡು, ನೃತ್ಯ, ಅಭಿನಯ, ನಾಟಕ, ಕಲೆ, ಸಾಹಿತ್ಯ, ಸಂಗೀತ ಮುಂತಾದವುಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಮಕ್ಕಳೆಲ್ಲ ಅಲ್ಲಲ್ಲಿ, ಮರಗಳ ಬುಡದಲ್ಲಿ ಗುಂಪುಕಟ್ಟಿಕೊಂಡು ಹಾಡು, ನೃತ್ಯಗಳನ್ನು ಕಲಿಯುವುದನ್ನು ಕಂಡಾಗ ಮುಂದೊಂದು ದಿನ ಈ ಮಕ್ಕಳು ರಂಗ ಭೂಮಿಗೆ ಎಂತೆಂಥಾ ಕೊಡುಗೆಗಳನ್ನು ನೀಡಬಲ್ಲರು ಎಂಬುದನ್ನು ಅರಿಯಬಹುದು.

ದಿನ ನಿತ್ಯ ಹಾಡುಗಳನ್ನು ಹಾಡುತ್ತಾ ಶಿಬಿರದ ಕೊನೆಗೆ ಒಂದು ಉತ್ತಮ ಸಂದೇಶವುಳ್ಳ ನಾಟಕವನ್ನು ಅಭಿನಯಿಸಿ ತೋರಿಸುತ್ತಾರೆ. ಕಾಡಿನ ಸಂರಕ್ಷಣೆ, ವನ್ಯ ಜೀವಿಗಳ ಬದುಕು, ಸಾಮಾಜಿಕ ಬದ್ಧತೆ – ಕಾಳಜಿ, ಸಾಮರಸ್ಯದ ಬದುಕು, ಪ್ರೀತಿ, ವಿಶ್ವಾಸ, ಸ್ನೇಹಗಳ ಅರಿವು… ಹೀಗೇ ಸಾಮಾಜಿಕ, ಪ್ರಾಕೃತಿಕ ವಿಚಾರಗಳನ್ನು ಸದಾ ಚಟುವಟಿಕೆಗಳ ಮೂಲಕ ಕಲಿಯುವ ಈ ಶಿಬಿರವು ಮಕ್ಕಳಿಗೆ ರಂಗಭೂಮಿಯ ಜೊತೆಗೆ ಅವರ ಶೈಕ್ಷಣಿಕ ಕಲಿಕೆಗೂ ಪೂರಕವಾಗಿ ಸಮಾಜದಲ್ಲಿ ಒಂದು ಶಕ್ತಿಯಾಗಿ ಪ್ರಬಲವಾಗಿ ಬೆಳಕಾಗುವುದನ್ನೂ ಕಲಿಸಿಕೊಡುತ್ತದೆ.

ಅಡವಿಯ ನಡುವೆಯೇ ಇದ್ದು, ಅಡವಿಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜ್ಞಾನ, ಅರಿವು, ಮಾಹಿತಿಗಳನ್ನು ಕಲಿತುಕೊಳ್ಳುವುದೇ ಈ ಶಿಬಿರದ ವಿಭಿನ್ನತೆ.

ಗಿರಿಜಾ ಸಿದ್ದಿ ಮತ್ತು ಡಾ. ಗೀತಾ ಸಿದ್ದಿಯವರು ಅಮೇರಿಕಾದಲ್ಲಿ ಸಿದ್ದಿ ಸಮುದಾಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದು, ಇದು ಅವರ ಪ್ರತಿಭೆ ಮತ್ತು ಸಾಧನೆಗೆ ವಿಶೇಷ ಮೆರುಗು ನೀಡಿದೆ.

ಇನ್ನೊಂದು ಮುಖ್ಯ ವಿಚಾರವೆಂದರೆ, ಇಲ್ಲಿ ಮೂರು ತಲೆಮಾರುಗಳು ರಂಗಭೂಮಿಯಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಹಿಂದೆ ಬಾಬು ಸಿದ್ದಿಯವರು ಆರಂಭಿಸಿದ್ದು ಈಗ ಗಿರೀಶ್ ಸಿದ್ದಿ, ಗಿರಿಜಾ ಸಿದ್ದಿ, ಡಾ. ಗೀತಾ ಸಿದ್ದಿಯವರು ಮುಂದುವರೆಸುತ್ತಿದ್ದಾರೆ. ಇದೀಗ ಮುಂದಿನ ಹಂತವಾಗಿ ಪನ್ನಿಕಾ ಸಿದ್ದಿ, ವಿನಿತಾ ಸಿದ್ದಿ, ದಿವ್ಯಾ ಸಿದ್ದಿ (ಈಗ ವಿದ್ಯಾರ್ಥಿನಿಯರು)ಯವರು ಈಗಲೇ ಮುಂದಿನ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share