Thursday, July 23, 2026
Join WhatsApp Group
HomeNationalಕಾಂಗ್ರೆಸ್‌ನಿಂದ ಬಿಜೆಪಿ ಕಡೆ; ಕೆಲಸ ಮಾಡಿತಾ ʼಆಪರೇಷನ್‌ ಪಾಲಿಟಿಕ್ಸ್‌ʼ?

ಕಾಂಗ್ರೆಸ್‌ನಿಂದ ಬಿಜೆಪಿ ಕಡೆ; ಕೆಲಸ ಮಾಡಿತಾ ʼಆಪರೇಷನ್‌ ಪಾಲಿಟಿಕ್ಸ್‌ʼ?

‘ಕಟ್ಟರ್‌ ಹಿಂದುತ್ವ’ ನಾಯಕರಾಗುತ್ತಿರುವ ರಾಜಕೀಯ ಮುಖಗಳು!

ಕಾಂಗ್ರೆಸ್‌ ಸೇರಿದಂತೆ ಜಾತ್ಯತೀತ ಪಕ್ಷಗಳಲ್ಲಿ ಗುರುತಿಸಿಕೊಂಡ ಅನೇಕ ನಾಯಕರು ಇಂದು ಬಿಜೆಪಿ ಸೇರಿ ಕಟ್ಟರ್‌ ಹಿಂದುತ್ವ ನಾಯಕರಾಗಿ ಮಿಂಚುತ್ತಿದ್ದಾರೆ. ಇತ್ತೀಚಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಬಳಿಕ ಈ ಚರ್ಚೆ ಮತ್ತೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟಗಳು ಗಮನಾರ್ಹ ಸಾಧನೆ ಮಾಡಿವೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೇರಿದರೆ, ತಮಿಳುನಾಡಿನಲ್ಲಿ ನಟ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಹೊಸ ಸಂಚಲನ ಮೂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೂ ದೊಡ್ಡ ಹಿನ್ನಡೆಯಾಗಿದೆ.

ಆದರೆ ಇಲ್ಲಿ ಪ್ರಮುಖವಾಗಿ ಗಮನಸೆಳೆಯುತ್ತಿರುವ ಸಂಗತಿಯೆಂದರೆ, ಬಿಜೆಪಿ ಇಂದು ಆಡಳಿತ ನಡೆಸುತ್ತಿರುವ ಕೆಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿರುವವರು ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ ಅಥವಾ ಇತರೆ ಜಾತ್ಯತೀತ ಪಕ್ಷಗಳಿಂದ ಹೊರಬಂದು ಬಿಜೆಪಿ ಸೇರಿದವರೇ ಇಂದು ಕೇಸರಿ ರಾಜಕಾರಣದ ಪ್ರಮುಖ ಮುಖಗಳಾಗಿದ್ದಾರೆ.

ಪುದುಚೇರಿಯ ಮುಖ್ಯಮಂತ್ರಿ N. Rangaswamy ಮೂಲತಃ ಕಾಂಗ್ರೆಸ್‌ನಲ್ಲಿದ್ದರು. ನಂತರ ಬಿಜೆಪಿ ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡು ಇದೀಗ ಮತ್ತೆ ಅಧಿಕಾರದಲ್ಲಿದ್ದಾರೆ.

ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ದೊಡ್ಡ ಸವಾಲಾಗಿ ಹೊರಹೊಮ್ಮಿರುವ Suvendu Adhikari ಮೊದಲು ಕಾಂಗ್ರೆಸ್‌ನಲ್ಲಿ ರಾಜಕೀಯ ಆರಂಭಿಸಿ ನಂತರ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿದ್ದ ಅವರು ಬಳಿಕ ಬಿಜೆಪಿ ಸೇರಿ ದೀದಿ ವಿರುದ್ಧವೇ ಹೋರಾಟ ನಡೆಸಿ ಪ್ರಮುಖ ನಾಯಕನಾಗಿ ಹೊರಹೊಮ್ಮಿದರು.

ಅಸ್ಸಾಂ ಮುಖ್ಯಮಂತ್ರಿ Himanta Biswa Sarma ಕೂಡ ಕಾಂಗ್ರೆಸ್‌ನಿಂದಲೇ ರಾಜಕೀಯ ಜೀವನ ಆರಂಭಿಸಿದವರು. ಕಾಂಗ್ರೆಸ್‌ನಲ್ಲಿ ಯುವ ನಾಯಕರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನದಿಂದ ಬಿಜೆಪಿ ಸೇರಿದ್ದ ಅವರು, ಈಶಾನ್ಯ ಭಾರತದಲ್ಲಿ ಬಿಜೆಪಿಯ ಬಲವರ್ಧನೆಗೆ ಪ್ರಮುಖ ಕಾರಣರಾದರು. ಇಂದು ಹಾರ್ಡ್‌ಕೋರ್‌ ಹಿಂದುತ್ವ ನಾಯಕನಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಹಾರದ Samrat Choudhary ಸೇರಿದಂತೆ ಇನ್ನೂ ಅನೇಕ ನಾಯಕರು ಇದೇ ಹಾದಿ ಅನುಸರಿಸಿದ್ದಾರೆ.

2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ತನ್ನ ರಾಜಕೀಯ ವಿಸ್ತರಣೆಗಾಗಿ “ಆಪರೇಷನ್‌ ಪಾಲಿಟಿಕ್ಸ್‌” ತಂತ್ರವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌ ಹಾಗೂ ಇತರೆ ಜಾತ್ಯತೀತ ಪಕ್ಷಗಳ ನಾಯಕರನ್ನು ಸೆಳೆದು ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ವಿಶೇಷವೆಂದರೆ, ಮೂಲ ಪಕ್ಷ ತೊರೆದು ಬಿಜೆಪಿ ಸೇರುವ ಬಹುತೇಕ ನಾಯಕರು ನಂತರ ಬಿಜೆಪಿಯವರಿಗಿಂತಲೂ ಹೆಚ್ಚು ತೀವ್ರ ಹಿಂದುತ್ವ ರಾಜಕಾರಣದ ಪ್ರತಿನಿಧಿಗಳಾಗಿ ಗುರುತಿಸಿಕೊಳ್ಳುತ್ತಿರುವುದು ದೇಶದ ಇಂದಿನ ರಾಜಕೀಯದ ಕುತೂಹಲಕರ ಬೆಳವಣಿಗೆಯಲ್ಲವೇ?!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share