ವಿ.ಎಸ್. ಪಾಟೀಲರ ಬಿಜೆಪಿ ಸೇರ್ಪಡೆ ವಿಚಾರ ಸಂಸದ ಕಾಗೇರಿ ಮರ್ಜಿಗೆ?
ಮುಂಡಗೋಡ/ಶಿರಸಿ: ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರುವ ಪ್ರಯತ್ನದಲ್ಲಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ರಾಜಕೀಯ ವಾಪಸಾತಿಗೆ ದಾರಿ ಇನ್ನೂ ಸಂಪೂರ್ಣವಾಗಿ ತೆರೆದಿಲ್ಲವೇ? ಬಿಜೆಪಿ ಸೇರ್ಪಡೆಗೆ ಪಾಟೀಲರು ನಡೆಸುತ್ತಿರುವ ಪ್ರಯತ್ನದ ನಡುವೆ, ಇದೀಗ ಅವರ ಮರುಪ್ರವೇಶದ ನಿರ್ಧಾರ ಸ್ಥಳೀಯ ನಾಯಕತ್ವ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಟ್ಟದಲ್ಲಿ ಅಂತಿಮಗೊಳ್ಳಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಬಿಜೆಪಿ ತೊರೆದು ಕಾಂಗ್ರೆಸ್ ಪಾಳಯದಲ್ಲಿದ್ದ ವಿ.ಎಸ್. ಪಾಟೀಲರಿಗೆ ಅಲ್ಲಿ ನಿರೀಕ್ಷಿತ ರಾಜಕೀಯ ಮನ್ನಣೆ ಸಿಗಲಿಲ್ಲ ಎಂಬ ಚರ್ಚೆಯ ನಡುವೆಯೇ, ಮತ್ತೆ ಮಾತೃಪಕ್ಷಕ್ಕೆ ಮರಳುವ ಪ್ರಯತ್ನ ಆರಂಭವಾಗಿದೆ ಎನ್ನಲಾಗಿದೆ. ಆರಂಭದಲ್ಲಿ ಪಾಟೀಲರು ಸ್ವತಃ ಬಿಜೆಪಿ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ನಿರೀಕ್ಷಿತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಇದೀಗ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕೆಳಹಂತದ ಕಾರ್ಯಕರ್ತರ ಮೂಲಕ ವರಿಷ್ಠರ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಜೋಶಿ ಭೇಟಿಯಲ್ಲಿ ಏನು ನಡೆಯಿತು?
ಯಲ್ಲಾಪುರ ಹಾಗೂ ಬನವಾಸಿ ಭಾಗದ ಕೆಲ ಬೂತ್ ಮಟ್ಟದ ಕಾರ್ಯಕರ್ತರ ನಿಯೋಗವೊಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ವಿ.ಎಸ್. ಪಾಟೀಲರ ಬಿಜೆಪಿ ಸೇರ್ಪಡೆ ಕುರಿತು ಮಾತುಕತೆ ನಡೆಸಿದೆ ಎನ್ನಲಾಗಿದೆ.
ಈ ವೇಳೆ, ಪಕ್ಷಕ್ಕೆ ಸೇರ್ಪಡೆಯಾಗುವುದು ಕೇವಲ ಮುಂದಿನ ಚುನಾವಣೆಯ ಟಿಕೆಟ್ ಉದ್ದೇಶದಿಂದ ಆಗಬಾರದು. ಬಿಜೆಪಿಯಲ್ಲಿ ಪಕ್ಷದ ಸಂಘಟನೆ ಹಾಗೂ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಇದೆ. ಸ್ಥಳೀಯ ನಾಯಕರು ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಜೋಶಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ವಿ.ಎಸ್. ಪಾಟೀಲರ ಬಿಜೆಪಿ ಪ್ರವೇಶದ ವಿಚಾರದಲ್ಲಿ ವರಿಷ್ಠರ ಮಟ್ಟದಲ್ಲಿ ನೇರ ನಿರ್ಧಾರಕ್ಕಿಂತ ಸ್ಥಳೀಯ ನಾಯಕತ್ವದ ಅಭಿಪ್ರಾಯವೇ ಪ್ರಮುಖವಾಗಬಹುದು ಎಂಬ ಸಂದೇಶ ಈ ಭೇಟಿಯಿಂದ ಹೊರಬಂದಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ತಲೆನೋವು ಹಚ್ಚಿಕೊಳ್ಳದ ವಿಜಯೇಂದ್ರ
ಇದಾದ ಬಳಿಕ ಪಾಟೀಲರ ಬೆಂಬಲಿಗರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಶಿಕಾರಿಪುರದಲ್ಲಿ ಭೇಟಿ ಮಾಡಿದೆ ಎನ್ನಲಾಗಿದೆ. ಈ ಭೇಟಿಯಲ್ಲಿಯೂ ವಿ.ಎಸ್. ಪಾಟೀಲರ ಪಕ್ಷ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ತಮ್ಮ ವ್ಯಾಪ್ತಿಯಲ್ಲಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ವಿಜಯೇಂದ್ರ ಸೂಚಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಸದ್ಯಕ್ಕೆ ವಿ.ಎಸ್. ಪಾಟೀಲರ ಬಿಜೆಪಿ ಮರುಸೇರ್ಪಡೆಯ ಚೆಂಡು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಂಗಳದಲ್ಲಿದೆ ಎಂಬ ಚರ್ಚೆ ಆರಂಭವಾಗಿದೆ.
ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ?
ಇದರ ನಡುವೆ, ವಿ.ಎಸ್. ಪಾಟೀಲರ ಮರುಸೇರ್ಪಡೆ ವಿಚಾರಕ್ಕೆ ಕ್ಷೇತ್ರದ ಎಲ್ಲ ಕಾರ್ಯಕರ್ತರಿಂದಲೂ ಒಂದೇ ರೀತಿಯ ಪ್ರತಿಕ್ರಿಯೆ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಪದೇಪದೇ ಪಕ್ಷ ಬದಲಿಸುವ ರಾಜಕೀಯ ಸಂಸ್ಕೃತಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯವನ್ನು ಕೆಲ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ವಿ.ಎಸ್. ಪಾಟೀಲರನ್ನು ಮತ್ತೆ ಬಿಜೆಪಿಗೆ ಕರೆತಂದರೆ, ಅವರ ಸೇರ್ಪಡೆಯ ಹೊಣೆ ಹೊರುವ ನಾಯಕರೇ ಮುಂದಿನ ಚುನಾವಣೆ ಹಾಗೂ ಪಕ್ಷ ಸಂಘಟನೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿ ಎಂಬ ಅಭಿಪ್ರಾಯವೂ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ವಿ.ಎಸ್. ಪಾಟೀಲರ ಬಿಜೆಪಿ ಸೇರ್ಪಡೆ ವಿಚಾರ ಇದೀಗ ಕೇವಲ ಅವರ ವೈಯಕ್ತಿಕ ರಾಜಕೀಯ ನಿರ್ಧಾರವಾಗಿ ಉಳಿದಿಲ್ಲ. ಸ್ಥಳೀಯ ಬಿಜೆಪಿ ನಾಯಕತ್ವ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿಲುವು ಹಾಗೂ ಕ್ಷೇತ್ರದ ಕಾರ್ಯಕರ್ತರ ಪ್ರತಿಕ್ರಿಯೆ ಈ ಮೂರೂ ಅಂಶಗಳು ಮುಂದಿನ ರಾಜಕೀಯ ಹೆಜ್ಜೆಯನ್ನು ನಿರ್ಧರಿಸುವ ಸಾಧ್ಯತೆ ಇದೆ.
ಆದರೆ, ವಿ.ಎಸ್. ಪಾಟೀಲರ ಬಿಜೆಪಿ ಸೇರ್ಪಡೆ ಕುರಿತು ಪಕ್ಷದ ಅಧಿಕೃತ ಘೋಷಣೆ ಅಥವಾ ಸಂಬಂಧಪಟ್ಟ ಪ್ರಮುಖ ನಾಯಕರಿಂದ ಸ್ಪಷ್ಟ ಹೇಳಿಕೆ ಇನ್ನಷ್ಟೇ ಹೊರಬರಬೇಕಿದೆ.