ಶಿರಸಿ: ವರಮಹಾಲಕ್ಷ್ಮೀ ವ್ರತಾಚರಣೆಯ ದಿನಾಂಕದ ಕುರಿತು ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯನ್ನು ಪರಿಷ್ಕರಿಸಿರುವ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಆಗಸ್ಟ್ 21ರಂದು (ಶ್ರಾವಣ ಮಾಸದ ಎರಡನೇ ಶುಕ್ರವಾರ) ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವಂತೆ ಭಕ್ತಾದಿಗಳಿಗೆ ತಿಳಿಸಿದೆ.
ಈ ಮೊದಲು ಆಗಸ್ಟ್ 28ರಂದು, ಶ್ರಾವಣ ಮಾಸದ ಮೂರನೇ ಶುಕ್ರವಾರ ವ್ರತಾನುಷ್ಠಾನ ನಡೆಸುವಂತೆ ಶ್ರೀಮಠದಿಂದ ನಿರ್ಣಯ ಪ್ರಕಟಿಸಲಾಗಿತ್ತು. ಆದರೆ ಈ ಕುರಿತು ಮತ್ತಷ್ಟು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೆಲವು ಪ್ರಬಲ ಪ್ರಮಾಣಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ದಿನಾಂಕವನ್ನು ಪರಿಷ್ಕರಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಆಗಸ್ಟ್ 21ರ ಎರಡನೇ ಶುಕ್ರವಾರದಂದೇ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ–ಭಕ್ತಿಗಳಿಂದ ಆಚರಿಸುವಂತೆ ಸಮಸ್ತ ಭಕ್ತಾದಿಗಳಿಗೆ ಶ್ರೀಮಠ ಮನವಿ ಮಾಡಿದೆ.
ವ್ರತಾಚರಣೆಯ ದಿನಾಂಕದ ಕುರಿತು ಗೊಂದಲಕ್ಕೆ ಅವಕಾಶವಿಲ್ಲದಂತೆ ಶ್ರೀಮಠದಿಂದ ಇದೀಗ ಹೊರಡಿಸಿರುವ ಅಧಿಕೃತ ಪ್ರಕಟಣೆಯನ್ನೇ ಅಂತಿಮವೆಂದು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.