Ad
Ad
Ad
Home Local News ಜನರ ಒಗ್ಗಟ್ಟಿನಿಂದ ಬೆಳಗಿದ ಮನೆಗಳ ದೀಪ!

ಜನರ ಒಗ್ಗಟ್ಟಿನಿಂದ ಬೆಳಗಿದ ಮನೆಗಳ ದೀಪ!

0
73

ಯಲ್ಲಾಪುರ: ನೀರಿನ ಟ್ಯಾಂಕ್‌ಗಳು ಬರಿದಾಗಿದ್ದವು. ಕತ್ತಲಾಗುತ್ತಿದ್ದಂತೆ ಸ್ವಿಚ್‌ ಒತ್ತಿದರೂ ಬಲ್ಬ್‌ ಬೆಳಗುತ್ತಿರಲಿಲ್ಲ. ಮೊಬೈಲ್‌ಗಳಿಗೆ ಚಾರ್ಜ್‌ ಇಲ್ಲ, ಟಿವಿ ಇಲ್ಲ, ಮಿಕ್ಸಿ-ಗ್ರೈಂಡರ್‌ಗಳ ಸದ್ದೂ ಇಲ್ಲ. ಮನೆಯೊಳಗೆ ಅಮ್ಮಂದಿರು “ಇಂದಾದರೂ ಕರೆಂಟ್‌ ಬರಬಹುದೇ?” ಎಂದು ಕಾದಿದ್ದರೆ, ಹೊರಗೆ ಗಂಡಸರು “ಮತ್ತೆ ಯಾವ ಮರ ಲೈನ್‌ ಮೇಲೆ ಬಿದ್ದಿದೆಯೋ?” ಎಂದು ಆತಂಕದಿಂದ ಓಡಾಡುತ್ತಿದ್ದರು.

ಕಳೆದ ಒಂದು ವಾರದಿಂದ ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳ ಸ್ಥಿತಿ ಇದೇ ಆಗಿತ್ತು. ಆದರೆ ಮಾಗೋಡ ಕಾಲನಿ, ದೇವರಗದ್ದೆ, ಮೊಟ್ಟೆಗದ್ದೆ, ನಂದೊಳ್ಳಿ, ಪಣತಗೇರಿ ಹಾಗೂ ಸೂಳಗಾರ ಭಾಗದ ಯುವಕರು ಮತ್ತು ಸಾರ್ವಜನಿಕರು ಕೈಜೋಡಿಸಿದ ಪರಿಣಾಮ, ಮೂರು ದಿನಗಳ ನಿರಂತರ ಹೋರಾಟದ ಬಳಿಕ ವಿದ್ಯುತ್ ಸಮಸ್ಯೆಯನ್ನು ಒಂದು ಹಂತದಲ್ಲಿ ಬಗೆಹರಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಕಳೆದ ಮೂರು ದಿನಗಳಿಂದ ಬೆಳಗಾಗುತ್ತಿದ್ದಂತೆಯೇ ಯುವಕರ ತಂಡಗಳು ವಿದ್ಯುತ್ ಲೈನ್‌ಗಳ ಪರಿಶೀಲನೆಗೆ ಹೊರಡುತ್ತಿದ್ದವು. ಇಂದು ಯಾವ ಜಾಗದಲ್ಲಿ ಮರ ಬಿದ್ದಿದೆ? ಯಾವ ಕಂಬದ ಬಳಿ ತಂತಿ ತುಂಡಾಗಿದೆ?” ಎಂಬುದೇ ಅವರ ಮೊದಲ ಪ್ರಶ್ನೆಯಾಗಿತ್ತು. ಕೆಲ ದಿನಗಳಂತೂ ಮಧ್ಯರಾತ್ರಿ 1 ಗಂಟೆಯವರೆಗೂ ದೋಷ ಪತ್ತೆ ಹಾಗೂ ತೆರವು ಕಾರ್ಯ ಮುಂದುವರಿದಿತ್ತು.

ಸ್ಥಳೀಯರು ಹಗಲು-ರಾತ್ರಿ ಎನ್ನದೆ ಲೈನ್‌ಗಳಲ್ಲಿನ ದೋಷಗಳನ್ನು ಪತ್ತೆಹಚ್ಚಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಇದೇ ವೇಳೆ ಯಲ್ಲಾಪುರ ಹಾಗೂ ಶಿರಸಿ ವಿಭಾಗದ ಹೆಸ್ಕಾಂ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳು ಸ್ಥಳಕ್ಕೇ ಆಗಮಿಸಿ ತಡರಾತ್ರಿಯವರೆಗೂ ದುರಸ್ತಿ ಕಾರ್ಯ ನಡೆಸಿದರು.

ಈ ನಿರಂತರ ಪ್ರಯತ್ನದ ಫಲವಾಗಿ ಹಲವು ದಿನಗಳಿಂದ ಕತ್ತಲಲ್ಲಿದ್ದ ಮನೆಗಳಲ್ಲಿ ಮತ್ತೆ ವಿದ್ಯುತ್ ಬೆಳಗಿದ್ದು, ಸ್ಥಳೀಯರಲ್ಲಿ ನೆಮ್ಮದಿ ಮೂಡಿದೆ.

ಈ ಕಾರ್ಯದಲ್ಲಿ ಕೈಜೋಡಿಸಿದ ಯುವಕರು, ಗ್ರಾಮಸ್ಥರು, ಹೆಸ್ಕಾಂ ಲೈನ್‌ಮನ್‌ಗಳು ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

“ಒಬ್ಬರಿಂದ ಸಾಧ್ಯವಾಗದ ಕೆಲಸವನ್ನು ಊರಿನ ಒಗ್ಗಟ್ಟು ಮಾಡಿ ತೋರಿಸಿದೆ. ಸಮಸ್ಯೆ ಬಂದಾಗ ಟೀಕಿಸುವುದಕ್ಕಿಂತ ಕೈಜೋಡಿಸಿದರೆ ಪರಿಹಾರ ಸಾಧ್ಯ ಎಂಬುದನ್ನು ಈ ಘಟನೆಯೇ ಸಾಬೀತುಪಡಿಸಿದೆ” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!