ಮುಂಡಗೋಡ: ಮುಂಡಗೋಡ ಕೆಎಸ್‌ಆರ್‌ಟಿಸಿ ಡಿಪೋದಿಂದ ರಾಯಚೂರಿಗೆ ಹೊಸದಾಗಿ ಆರಂಭಿಸಲಾದ ಬಸ್ ಸೇವೆಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕೃಷ್ಣ ಎಚ್. ಹಿರೆಹಳ್ಳಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ನೂತನ ಬಸ್ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಮುಂಡಗೋಡದಿಂದ ಹೊರಟು ಹುಬ್ಬಳ್ಳಿ, ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು ಹಾಗೂ ಮಾನ್ವಿ ಮಾರ್ಗವಾಗಿ ಸಂಜೆ 7 ಗಂಟೆಗೆ ರಾಯಚೂರು ತಲುಪಲಿದೆ. ಮರುದಿನ ಬೆಳಿಗ್ಗೆ 8 ಗಂಟೆಗೆ ರಾಯಚೂರಿನಿಂದ ಹೊರಟು ಸಂಜೆ 5 ಗಂಟೆಗೆ ಮುಂಡಗೋಡಕ್ಕೆ ಆಗಮಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕೃಷ್ಣ ಎಚ್.ಹಿರೆಹಳ್ಳಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರು, ಕೂಲಿಕಾರರು ಹಾಗೂ ನಿರ್ಗತಿಕರಿಗೆ ಹೆಚ್ಚಿನ ನೆರವು ದೊರೆತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದು ಉತ್ತಮ ಕ್ರಮವಾಗಿದೆ ಎಂದರು.
ಮುಂಡಗೋಡದಿಂದ ಮಂತ್ರಾಲಯ ಹಾಗೂ ರಾಯಚೂರು ಭಾಗಕ್ಕೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಸ ಬಸ್ ಸೇವೆ ಆರಂಭಿಸಲು ಸಹಕರಿಸಿದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಅವರು ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ನೆರವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಧರ್ಮರಾಜ ನಡಗೇರ, ಗ್ಯಾರಂಟಿ ಸಮಿತಿ ಸದಸ್ಯರಾದ ಹನುಮಂತಗೌಡ, ಸಚಿನ್ ಬಾಂದೇಕರ್, ಪ.ಪಂ ಮಾಜಿ ಸದಸ್ಯ ಎಂ.ಕೆ. ರಜಾಕ್, ಮುಂಡಗೋಡ ಡಿಪೋ ವ್ಯವಸ್ಥಾಪಕ ಸಲೀಂ ಕುರ್ತುಕೋಟಿ, ಬಸವರಾಜ ಸಂಗಮೇಶ್ವರ, ಆಶಿಫ್ ಮಕಾಂದಾರ್, ಬಸ್ ಚಾಲಕರು, ನಿರ್ವಾಹಕರು, ಆಟೋ ಚಾಲಕರು, ಸಾರ್ವಜನಿಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.