– ಸೌಪರ್ಣಿಕಾ.
ಇಂದಿನ ಕಾಲದಲ್ಲಿ ಅನೇಕರು ಸೋಲಿನ ಭಯದಲ್ಲೇ ಬದುಕುತ್ತಿದ್ದಾರೆ. ಆಗದೇ ಹೋದರೆ?, ಜನ ಏನು ಹೇಳುತ್ತಾರೆ?, ನಾನು ಸೋತರೆ? ಎನ್ನುವ ಪ್ರಶ್ನೆಗಳೇ ಹಲವರ ಕನಸುಗಳನ್ನು ಕಟ್ಟಿ ಹಾಕುತ್ತಿವೆ. ಆದರೆ ಬದುಕು ಎಂಬುದು ಒಂದೇ ಜಾಗದಲ್ಲಿ ನಿಂತವರನ್ನು ನೆನಪಿಡುವುದಿಲ್ಲ. ಧೈರ್ಯವಾಗಿ ಹೆಜ್ಜೆ ಇಟ್ಟವರನ್ನೇ ಗುರುತಿಸುತ್ತದೆ.
ಒಂದು ಕೆಲಸಕ್ಕೆ ಕೈ ಹಾಕಿದಾಗ ನಿಜವಾಗಿ ಇರುವುದೇ ಎರಡು ಫಲಿತಾಂಶಗಳು. ಗೆಲುವು ಅಥವಾ ಸೋಲು. ಗೆದ್ದರೆ ಯಶಸ್ಸು ಸಿಗುತ್ತದೆ. ಸೋತರೆ ಅನುಭವ ಸಿಗುತ್ತದೆ. ಎರಡೂ ಬದುಕಿಗೆ ಬೇಕಾದ ಪಾಠಗಳೇ. ಹೀಗಿರುವಾಗ ಸೋಲಿಗೇಕೆ ಅಂಜಿಕೆ?
ನಡೆಯಲು ಕಲಿಯುವ ಮಗು ಎಷ್ಟೋ ಬಾರಿ ಬೀಳುತ್ತದೆ. ಆದರೆ ಅದು ನನಗೆ ನಡೆಯೋಕೆ ಬರಲ್ಲ ಎಂದು ಅಲ್ಲೇ ಕುಳಿತುಕೊಳ್ಳುವುದಿಲ್ಲ. ಮತ್ತೆ ಎದ್ದು ಹೆಜ್ಜೆ ಇಡುತ್ತದೆ. ಅದೇ ಬದುಕಿನ ನಿಜವಾದ ಪಾಠ. ಮನುಷ್ಯನ ದೊಡ್ಡ ಗೆಲುವು ಎಂದರೆ ಎಂದಿಗೂ ಬೀಳದೇ ಇರುವುದು ಅಲ್ಲ. ಬಿದ್ದರೂ ಮತ್ತೆ ಎದ್ದು ನಿಲ್ಲುವುದು.
ಇಂದು ಯಶಸ್ವಿಯಾದ ಪ್ರತಿಯೊಬ್ಬರ ಹಿಂದೆಯೂ ಕಾಣದ ಸಾಲು ಸಾಲು ಸೋಲುಗಳ ಇತಿಹಾಸ ಇದೆ. ಪರೀಕ್ಷೆಯಲ್ಲಿ ಸೋತವರು ಅಧಿಕಾರಿಗಳಾಗಿದ್ದಾರೆ. ವ್ಯವಹಾರದಲ್ಲಿ ನಷ್ಟ ಕಂಡವರು ದೊಡ್ಡ ಉದ್ಯಮಿಗಳಾಗಿದ್ದಾರೆ. ಒಂದು ಅವಕಾಶ ಕೈತಪ್ಪಿದವರು ಜೀವನದಲ್ಲಿ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಏಕೆಂದರೆ ಅವರು ಸೋಲನ್ನು ಅಂತ್ಯ ಎಂದು ನೋಡಲಿಲ್ಲ, ಅದು ಮುಂದಿನ ಗೆಲುವಿನ ತಯಾರಿ ಎಂದು ಅರ್ಥ ಮಾಡಿಕೊಂಡರು.
ಬಹಳ ಬಾರಿ ನಮ್ಮನ್ನು ತಡೆಯುವುದು ಪರಿಸ್ಥಿತಿ ಅಲ್ಲ, ನಮ್ಮೊಳಗಿನ ಭಯ. ʻನನಗೆ ಆಗಲ್ಲʼ ಎಂಬ ಒಂದೇ ಒಂದು ಯೋಚನೆ ಸಾವಿರ ಅವಕಾಶಗಳನ್ನು ಕೊಲ್ಲುತ್ತದೆ. ಆದರೆ ʻಒಮ್ಮೆ ಪ್ರಯತ್ನಿಸೋಣʼ ಎನ್ನುವ ಚಿಕ್ಕ ಧೈರ್ಯ ಬದುಕನ್ನೇ ಬದಲಿಸಬಹುದು.
ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕ ನಂತರ ಯಾರೂ ಪ್ರಯಾಣ ಆರಂಭಿಸುವುದಿಲ್ಲ. ಅನಿಶ್ಚಿತತೆಯ ಮಧ್ಯೆ ಹೆಜ್ಜೆ ಇಡುವವರೇ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಾರೆ.
ಆದ್ದರಿಂದ, ಕನಸು ಕಾಣುವುದನ್ನು ನಿಲ್ಲಿಸಬೇಡಿ. ಪ್ರಯತ್ನಿಸಲು ಹಿಂಜರಿಯಬೇಡಿ. ಸೋಲಿಗೆ ಹೆದರಿ ನಿಂತ ಬದುಕಿಗಿಂತ, ಪ್ರಯತ್ನಿಸಿ ಬಿದ್ದ ಬದುಕೇ ಸಾವಿರ ಪಟ್ಟು ಶ್ರೇಷ್ಠ.
ಏಕೆಂದರೆ…ಸೋಲು ನಿನ್ನನ್ನು ನಿಲ್ಲಿಸಲು ಬರುವುದಿಲ್ಲ. ಇನ್ನಷ್ಟು ಗಟ್ಟಿಯಾಗಿಸಲು ಬರುತ್ತದೆ. ಸೋಲಿಗೇಕೆ ಅಂಜಿಕೆ? ಮುಂದಡಿಯಿಡು…!