ಯಲ್ಲಾಪುರ: ಯಲ್ಲಾಪುರದಲ್ಲಿ ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ಪ್ರಮುಖರ ಪಕ್ಷಾಂತರ ಮುಂದುವರಿದಿದ್ದು, ಹನುಮಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅರ್ಜುನ ಬಂಡಿವಡ್ಡರ್ ಹಾಗೂ ಹುನಗುಂದದ ಬಿಜೆಪಿ ಮುಖಂಡ ಧರಣೇಂದ್ರ ಹೊಂಡದಗಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರು ಇಬ್ಬರಿಗೂ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಕಾಂಗ್ರೆಸ್ನ ತತ್ವ, ಸಿದ್ಧಾಂತ ಹಾಗೂ ಅಭಿವೃದ್ಧಿಪರ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಅರ್ಜುನ ಬಂಡಿವಡ್ಡರ್ ಹಾಗೂ ಧರಣೇಂದ್ರ ಹೊಂಡದಗಟ್ಟಿ ಅವರನ್ನು ಅಭಿನಂದಿಸಿದ ವಿವೇಕ್ ಹೆಬ್ಬಾರ್, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಯಲ್ಲಪ್ಪ ಭದ್ರಾಪುರ, ಕುಬೇರ ಹಿರೇಹಳ್ಳಿ, ಗೋವಿಂದ ದೊಡ್ಡಅಂಡಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.