ಯಲ್ಲಾಪುರದಲ್ಲಿ ಅರಣ್ಯ ಇಲಾಖೆಯ ಸಸ್ಯ ಸಂತೆಗೆ ಭರ್ಜರಿ ಸ್ಪಂದನೆ
ಯಲ್ಲಾಪುರ: ವಿಶ್ವ ಪರಿಸರ ದಿನದ ಆಚರಣೆಗಳು ಬಹುತೇಕ ಕಡೆ ಭಾಷಣ, ಪ್ರತಿಜ್ಞೆ ಹಾಗೂ ಔಪಚಾರಿಕ ಕಾರ್ಯಕ್ರಮಗಳಿಗೆ ಸೀಮಿತವಾಗುವುದು ಸಾಮಾನ್ಯ. ಆದರೆ ಯಲ್ಲಾಪುರ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಸರ ಸಂರಕ್ಷಣೆಯ ಸಂದೇಶವನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದು, ಅದರ ಫಲವಾಗಿ ಪಟ್ಟಣದ ಸಂತೆಯಲ್ಲಿ ಆಯೋಜಿಸಿದ್ದ “ಸಸ್ಯ ಸಂತೆ” ಸಾರ್ವಜನಿಕರ ಗಮನ ಸೆಳೆಯಿತು.
2026ರ ವಿಶ್ವ ಪರಿಸರ ದಿನದ ಅಂಗವಾಗಿಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ ಮತ್ತು ಜನಸಹಭಾಗಿತ್ವದ ಸುಂದರ ಚಿತ್ರಣ ಮೂಡಿಬಂತು. ವಾರದ ಸಂತೆಗೆ ಬಂದಿದ್ದ ಜನರು ದಿನನಿತ್ಯದ ತರಕಾರಿ, ದಿನಸಿ ಖರೀದಿಯ ಜೊತೆಗೆ ಸಸಿಗಳನ್ನೂ ಕೊಂಡೊಯ್ದರು. ವಿಶೇಷವಾಗಿ ಬಸ್ ನಿಲ್ದಾಣದ ಸಮೀಪ ಕಾರ್ಯಕ್ರಮ ನಡೆದಿದ್ದರಿಂದ ಪ್ರಯಾಣಿಕರು ಬಸ್ಸುಗಳನ್ನು ಕೆಲ ಕ್ಷಣ ನಿಲ್ಲಿಸಿ ಸಸಿಗಳನ್ನು ಪಡೆದುಕೊಂಡು ತಮ್ಮ ಚೀಲಗಳಲ್ಲಿ ತರಕಾರಿಗಳ ಜೊತೆಗೆ ಸಸಿಗಳನ್ನೂ ತುಂಬಿಕೊಂಡು ಮನೆಗೆ ತೆರಳಿದ ದೃಶ್ಯ ಪರಿಸರ ಜಾಗೃತಿಯ ನೈಜ ಪ್ರತಿಬಿಂಬವಾಗಿ ಕಂಡುಬಂತು.
ಯಲ್ಲಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಯಲ್ಲಾಪುರ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಸಸ್ಯ ಸಂತೆಯನ್ನು ಶಾಸಕ ಶಿವರಾಮ ಹೆಬ್ಬಾರ ಹಾಗೂ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಜಾತಿಯ ಸಸಿಗಳನ್ನು ಪಡೆದುಕೊಂಡರು.
ಶ್ರೀಗಂಧ, ರಕ್ತಚಂದನ, ಸಂಪಿಗೆ, ಹಲಸು, ಮಾವು, ಸಿಲ್ವರ್ ಓಕ್, ಮಹಾಗನಿ ಸೇರಿದಂತೆ ಪರಿಸರ ಹಾಗೂ ಆರ್ಥಿಕ ಮಹತ್ವ ಹೊಂದಿರುವ ಹಲವು ಜಾತಿಯ ಸಸಿಗಳನ್ನು ವಿತರಿಸಲಾಯಿತು. ಗ್ರಾಮೀಣ ಭಾಗಗಳಿಂದ ಬಂದ ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ವಿವಿಧ ವರ್ಗದ ಜನರು ಸಸಿಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಮನೆ, ತೋಟ ಹಾಗೂ ಜಮೀನುಗಳಲ್ಲಿ ನೆಡುವ ಉದ್ದೇಶದಿಂದ ಖರೀದಿಸಿದರು.
ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಬಸ್ ಪ್ರಯಾಣಿಕರೂ ಕಾರ್ಯಕ್ರಮದಲ್ಲಿ ಆಸಕ್ತಿ ತೋರಿದ್ದು ಗಮನಾರ್ಹವಾಗಿತ್ತು. ಸಾಮಾನ್ಯವಾಗಿ ಪರಿಸರ ದಿನಾಚರಣೆಗಳು ಸಭಾಂಗಣಗಳ ಒಳಗೆ ನಡೆಯುವ ಸಂದರ್ಭದಲ್ಲಿ, ಜನರ ನಡುವೆ ಹೋಗಿ ಪರಿಸರದ ಸಂದೇಶವನ್ನು ತಲುಪಿಸುವ ಈ ರೀತಿಯ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಳೆದ ಕೆಲವು ವರ್ಷಗಳಿಂದ ಯಲ್ಲಾಪುರ ಅರಣ್ಯ ವಲಯ ಪರಿಸರ ಜಾಗೃತಿ, ವೃಕ್ಷಾರೋಪಣ, ಅರಣ್ಯ ಸಂರಕ್ಷಣೆ ಹಾಗೂ ಜನಸಹಭಾಗಿತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಈ ಬಾರಿಯ ಸಸ್ಯ ಸಂತೆಯೂ ಆ ಕಾರ್ಯಚಟುವಟಿಕೆಗಳ ಮುಂದುವರಿದ ಭಾಗವಾಗಿದೆ.
ಕೇವಲ ಸಸಿಗಳನ್ನು ವಿತರಿಸುವುದಲ್ಲದೆ, ಜನರಲ್ಲಿ ಮರಗಳ ಮಹತ್ವದ ಕುರಿತು ಅರಿವು ಮೂಡಿಸಿ, ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ದಿಸೆಯಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಪರಿಸರ ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬ ಸಂದೇಶವನ್ನು ಯಲ್ಲಾಪುರದ ಈ ಸಸ್ಯ ಸಂತೆ ಅರ್ಥಪೂರ್ಣವಾಗಿ ಸಾರಿತು.