Monday, September 7, 2026
Join WhatsApp Group
HomeCrime25 ವರ್ಷಗಳ ಹಿಂದಿನ ಪ್ರಕರಣ; ಗುಜರಾತ್‌ನಲ್ಲಿ ಆರೋಪಿಯ ಬಂಧನ

25 ವರ್ಷಗಳ ಹಿಂದಿನ ಪ್ರಕರಣ; ಗುಜರಾತ್‌ನಲ್ಲಿ ಆರೋಪಿಯ ಬಂಧನ

ಯಲ್ಲಾಪುರ: ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಕಳೆದ 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಪೊಲೀಸರು ಗುಜರಾತ್‌ನಲ್ಲಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಗುಜರಾತ್‌ನ ಪೋರಬಂದರ್ ಜಿಲ್ಲೆಯ ರಣವಾವ್‌ ಪ್ರದೇಶದ ಕೇಸುಬಾಯಿ ಸಿಸೋಡಿಯಾ (58) ಬಂಧಿತ ಆರೋಪಿತ. 2001ರಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನಾ ನಂ.116/2001ರ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ.

2001ರ ಮೇ 23ರಂದು ಯಲ್ಲಾಪುರದ ಕಾರವಾರ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ-63ರ ಜೋಗಿಕೊಪ್ಪ ರಸ್ತೆ ಕತ್ರಿ ಬಳಿ ಕೇಸುಬಾಯಿ ಲಾರಿ ಚಲಾಯಿಸಿಕೊಂಡು ಬಂದು ಕೆಎಸ್‌ಆರ್‌ಟಿಸಿ ಬಸ್‌ನ್ನು ಓವರ್‌ಟೇಕ್‌ ಮಾಡುವ ವಿಚಾರದಲ್ಲಿ ಬಸ್ ಚಾಲಕನೊಂದಿಗೆ ಜಗಳ ಮಾಡಿಕೊಂಡಿದ್ದ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 2001ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಬಂದ ಬಳಿಕ ಕೇಸುಬಾಯಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನ ವಿಳಾಸಕ್ಕೆ ಹಲವು ಬಾರಿ ವಾರೆಂಟ್‌ ಜಾರಿಗೊಳಿಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ನ್ಯಾಯಾಲಯದಿಂದ ಉದ್ಘೋಷಣೆಯೂ ಹೊರಡಿಸಲಾಗಿತ್ತು.

ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ 2010ರ ಏಪ್ರಿಲ್ 12ರಂದು ಪ್ರಕರಣವನ್ನು ಎಲ್‌ಪಿಸಿ ನಂ.01/2010 ಎಂದು ದಾಖಲಿಸಲಾಗಿತ್ತು. ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಹಾಗೂ ಯಲ್ಲಾಪುರ ಪಿಐ ರಮೇಶ ಹನಾಪುರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಅವರ ನೇತೃತ್ವದಲ್ಲಿ ವಿಶೇಷ ಪತ್ತೆ ಕಾರ್ಯಾಚರಣೆ ನಡೆಸಲಾಯಿತು.

ಆರೋಪಿತನು ಗುಜರಾತ್‌ನ ರಣವಾವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ ಹಾಗೂ ಮಾರುತಿ ಅವರ ತಂಡದ ಮೂಲಕ ಆತನನ್ನು ಬಂಧಿಸಿದ್ದಾರೆ. ಬಳಿಕ ಆ.25ರಂದು ಆರೋಪಿತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪತ್ತೆ ಕಾರ್ಯಕ್ಕೆ ಸಿಬ್ಬಂದಿಗಳಾದ ಸಂತೋಷ ಬಾಳೇರ, ಬಸವರಾಜ ಡಿ.ಕೆ., ಪರಮೇಶ್ವರ ಎಸ್.ಕೆ., ಎಂಎಪಿಸಿ ರೇಖಾ ಎಂ.ಎಸ್., ಅಂಕೋಲಾ ಪೊಲೀಸ್ ಠಾಣೆಯ ಅಪರಾಧ ಸಿಬ್ಬಂದಿ ಮಹಮದ್ ಶಫೀ ಶೇಖ್ ಹಾಗೂ ಕಾರವಾರದ ಟೆಕ್ನಿಕಲ್‌ ಸೆಲ್‌ ವಿಭಾಗದ ಉದಯ ಗುನಗಾ, ಬಬನ್ ಡಿ. ಕದಂ ಮತ್ತು ಮಹಾಲಿಂಗ ಸಾವಳಗಿ ಸಹಕರಿಸಿದ್ದಾರೆ.

25 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share