ಯಲ್ಲಾಪುರ: ಹಳಿಯಾಳ ಕ್ರಾಸ್–ಕಣ್ಣಿಗೇರಿ ಮಾರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 60 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆ.17ರಂದು ಸಂಜೆ 4.45ರ ಸುಮಾರಿಗೆ ಕಣ್ಣಿಗೇರಿ ಗ್ರಾಮದ ಹೋಟೆಲ್ ಬಳಿ ಘಟನೆ ನಡೆದಿತ್ತು. ಹಳಿಯಾಳ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಹೊಸ ಬುಲೆರೋ ಪಿಕಪ್ ವಾಹನದ ಚಾಲಕ, ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನಾಗೇಂದ್ರ ತಂದೆ ಚಂದ್ರಮಣಿ ಸಿಂಗ್ ಎಂಬಾತ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು, ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದ.
ಅಪಘಾತದಲ್ಲಿ ಸ್ಕೂಟಿ ಸವಾರ ಗುದ್ನಹೊಂಡ, ಕಣ್ಣಿಗೇರಿ ನಿವಾಸಿ ದೆಮೋ ಗಣೇಶ ಮರಾಠಿ (60) ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದ್ದವು.
ಗಂಭೀರ ಗಾಯಗೊಂಡಿದ್ದ ದೆಮೋ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.23ರಂದು ಮಧ್ಯಾಹ್ನ 1.50ರ ಸುಮಾರಿಗೆ ಮೃತಪಟ್ಟಿದ್ದಾರೆ.