ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಅಂದರ್–ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ದೊಡ್ಡಯಲವಳ್ಳಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅಂದರ್–ಬಾಹರ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜಶೇಖರ ವಂದಲಿ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಪಂಚರು ಸ್ಥಳಕ್ಕೆ ದಾಳಿ ನಡೆಸಿದಾಗ, ಆರೋಪಿತರು ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ.
ದಾಳಿಯ ವೇಳೆ ಇಂದಿರಾನಗರ, ಕಿರವತ್ತಿಯ ಮಹ್ಮದ್ ಯುಸೂಫ್ ಜಮಾಲ ಶೇಖ್ (33), ಹೊಸಳ್ಳಿಯ ರಾಜು ಗಂಗಾಧರ ಕರಾಡೆ (47), ಪಾನಿಗುಂಡಿ-ಹುಣಸಗೇರಿಯ ಮಂಜುನಾಥ ಸಿದ್ದಪ್ಪ ಹುಡೇದ (24), ಜಯಂತಿನಗರ-ಕಿರವತ್ತಿಯ ಲಕ್ಷ್ಮಣ ಪಾರ್ವತಪ್ಪ ಬೆಂಗೇರಿ (33) ಹಾಗೂ ಹೊಸಳ್ಳಿಯ ಮಾರುತಿ ಬರ್ಮಣ್ಣ ಕಾಂಬಳೆ (55) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿತರ ಬಳಿಯಿಂದ ಹಾಗೂ ಜೂಜಾಟದ ಸ್ಥಳದಲ್ಲಿದ್ದ ಹಣ ಸೇರಿ ಒಟ್ಟು ₹750 ನಗದು ಹಾಗೂ ಇಸ್ಪೀಟ್ ಜೂಜಾಟಕ್ಕೆ ಬಳಸಲಾಗುತ್ತಿದ್ದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.