ಹುಬ್ಬಳ್ಳಿ–ಅಂಕೋಲಾ ಯೋಜನೆಗೆ ಭೂಸ್ವಾಧೀನ ಅಧಿಸೂಚನೆ
ಹುಬ್ಬಳ್ಳಿ/ಕಾರವಾರ: ಒಂದು ಕಡೆ ಉತ್ತರ ಕರ್ನಾಟಕದಿಂದ ಕರಾವಳಿಗೆ ವೇಗದ ರೈಲು ಸಂಪರ್ಕದ ಕನಸು, ಮತ್ತೊಂದೆಡೆ ದೇಶದ ಅತ್ಯಂತ ಸೂಕ್ಷ್ಮ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾದ ಪಶ್ಚಿಮ ಘಟ್ಟ. ಈ ಎರಡರ ನಡುವಿನ ಸಂಘರ್ಷಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಹುಬ್ಬಳ್ಳಿ, ಕಲಘಟಗಿ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ವಲಯ ಅಧಿಸೂಚನೆ ಹೊರಡಿಸಿದೆ.
ಒಟ್ಟು 163 ಕಿ.ಮೀ ಉದ್ದದ ಹಾಗೂ ₹16,435 ಕೋಟಿ ಅಂದಾಜು ವೆಚ್ಚದ ವಿದ್ಯುದ್ದೀಕರಣ ಸಹಿತ ಹೊಸ ಬ್ರಾಡ್‌ಗೇಜ್ ಜೋಡಿ ರೈಲ್ವೆ ಮಾರ್ಗ ಇದಾಗಿದೆ. ಯೋಜನೆಗಾಗಿ ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 13, ಯಲ್ಲಾಪುರ ತಾಲೂಕಿನ 24 ಹಾಗೂ ಅಂಕೋಲಾ ತಾಲೂಕಿನ 16 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಯೋಜನೆ ಹೊಸದಲ್ಲ. 1997-98ರಲ್ಲೇ ಮಂಜೂರಾಗಿದ್ದ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಆಗ ಯೋಜನೆಯ ನಿರ್ಮಾಣ ವೆಚ್ಚವನ್ನು ಕೇವಲ ₹483 ಕೋಟಿ ಎಂದು ಅಂದಾಜಿಸಲಾಗಿತ್ತು. ಇದೀಗ ಯೋಜನೆಯ ಅಂದಾಜು ವೆಚ್ಚ ₹16,435 ಕೋಟಿಗೆ ಏರಿಕೆಯಾಗಿದೆ.
ರೈಲ್ವೆ ಇಲಾಖೆಯ ಅಧಿಕೃತ ಪರಿಸರ ಪ್ರಸ್ತಾವನೆಯ ಪ್ರಕಾರ, ಹುಬ್ಬಳ್ಳಿ–ಅಂಕೋಲಾ ಮಾರ್ಗದ ಒಟ್ಟು ಉದ್ದ ಸುಮಾರು 164.44 ಕಿ.ಮೀ ಆಗಿದ್ದು, ಹುಬ್ಬಳ್ಳಿಯಿಂದ ಯಲ್ಲಾಪುರದವರೆಗೆ ಸುಮಾರು 75 ಕಿ.ಮೀ. ಪ್ರದೇಶ ಸಮತಟ್ಟಾಗಿರುತ್ತದೆ. ಯಲ್ಲಾಪುರದಿಂದ ಸುಂಕಸಾಳದವರೆಗೆ ಸುಮಾರು 56 ಕಿ.ಮೀ. ಮಾರ್ಗ ಪಶ್ಚಿಮ ಘಟ್ಟದ ಘಾಟ್ ಪ್ರದೇಶವನ್ನು ದಾಟಲಿದೆ. ಉಳಿದ ಭಾಗ ಸುಂಕಸಾಳದಿಂದ ಅಂಕೋಲಾವರೆಗೆ ಗುಡ್ಡಗಾಡು ಪ್ರದೇಶದ ಮೂಲಕ ಸಾಗಲಿದೆ.
ಲಭ್ಯವಿರುವ ಅಧಿಕೃತ ದಾಖಲೆಗಳ ಪ್ರಕಾರ, ಯೋಜನೆಗೆ 595.64 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಬಳಕೆಗೆ ತಿರುಗಿಸುವ ಪ್ರಸ್ತಾವನೆ ಈ ಹಿಂದೆ ವನ್ಯಜೀವಿ ಅನುಮೋದನೆ ಪ್ರಕ್ರಿಯೆಯಲ್ಲಿತ್ತು. ಈ ಮಾರ್ಗವು ಹುಲಿ ಸಂಚಾರ ಪ್ರದೇಶಗಳನ್ನು ಸಂಪರ್ಕಿಸುವ ಅರಣ್ಯ ಪ್ರದೇಶಗಳ ಮೂಲಕ ಸಾಗಲಿದೆ ಎಂಬುದನ್ನೂ ಕೇಂದ್ರದ ವನ್ಯಜೀವಿ ಸಂಬಂಧಿತ ದಾಖಲೆ ಉಲ್ಲೇಖಿಸಿದೆ.
ಇತ್ತೀಚಿನ ಪರಿಷ್ಕೃತ ಯೋಜನೆಯಲ್ಲಿ 163 ಕಿ.ಮೀ ಉದ್ದದ ವಿದ್ಯುದ್ದೀಕೃತ ಡಬಲ್ ಲೈನ್ ರೂಪದಲ್ಲಿ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಜುಲೈ 2026ರಲ್ಲಿ ರೈಲ್ವೆ ಇಲಾಖೆ ಹೊಸದಾಗಿ ಅರಣ್ಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಪರಿಷ್ಕೃತ ಯೋಜನೆಯಲ್ಲಿ ಸುಮಾರು 586 ಹೆಕ್ಟೇರ್ ಅರಣ್ಯ ಭೂಮಿ ಬೇಕಾಗಲಿದೆ ಎಂದು ವರದಿಯಾಗಿದೆ.
ಈ ಯೋಜನೆಗೆ ರೈಲ್ವೆ ಇಲಾಖೆಯ ದೃಷ್ಟಿಯಲ್ಲಿ ಹಲವು ಮಹತ್ವಗಳಿವೆ. ಹುಬ್ಬಳ್ಳಿಯ ಒಳನಾಡು ಪ್ರದೇಶವನ್ನು ಅಂಕೋಲಾ ಮೂಲಕ ಕರಾವಳಿ ರೈಲು ಸಂಪರ್ಕಕ್ಕೆ ಜೋಡಿಸುವುದು, ಸರಕು ಸಾಗಣೆ ಸುಗಮಗೊಳಿಸುವುದು, ಉತ್ತರ ಕರ್ನಾಟಕದಿಂದ ಕರಾವಳಿ ಬಂದರುಗಳಿಗೆ ಸಂಪರ್ಕ ಕಲ್ಪಿಸುವುದು ಹಾಗೂ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ರೈಲು ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ರೈಲ್ವೆಯ ಅಧಿಕೃತ ದಾಖಲೆ ವಿವರಿಸುತ್ತದೆ.
ಆದರೆ, ರೈಲು ಹಳಿ ನಿರ್ಮಾಣಕ್ಕೆ ಬೇಕಾಗಿರುವ ಭೂಮಿಯಲ್ಲಿ ಅರಣ್ಯ, ಜೀವವೈವಿಧ್ಯ, ಕಾಡಿನ ಮೇಲೆ ಅವಲಂಬಿತ ಸಮುದಾಯಗಳು ಹಾಗೂ ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಯೂ ಸೇರಿದೆ. ಮೂಲ ವರದಿಯಲ್ಲಿ ಉಲ್ಲೇಖಿಸಿರುವಂತೆ, ಯೋಜನೆಗಾಗಿ 1,466 ಎಕರೆ ಕಾಡು ಪ್ರದೇಶ, 596 ಎಕರೆ ಖಾಸಗಿ ಪ್ರದೇಶ ಹಾಗೂ 470 ಎಕರೆ ಸರ್ಕಾರಿ ಜಾಗ ಸೇರಿ ಒಟ್ಟು 2,532 ಎಕರೆ ಭೂಮಿ ಅಗತ್ಯವಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಮರಗಿಡಗಳನ್ನು ಕಡಿಯಬೇಕಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಯೋಜನೆಗೆ ಸಂಬಂಧಿಸಿದ ಅರಣ್ಯ ಮತ್ತು ವನ್ಯಜೀವಿ ಅನುಮೋದನೆಗಳ ಪ್ರಕ್ರಿಯೆ ಇನ್ನೂ ಮಹತ್ವದ ಹಂತವಾಗಿರುವುದರಿಂದ, ಮುಂದಿನ ಬೆಳವಣಿಗೆಗಳ ಮೇಲೆ ಉತ್ತರ ಕನ್ನಡ ಮಾತ್ರವಲ್ಲದೆ ಇಡೀ ರಾಜ್ಯದ ಪರಿಸರಾಸಕ್ತರ ಗಮನ ನೆಟ್ಟಿದೆ.