Saturday, September 19, 2026
Join WhatsApp Group
HomeAgricultureಜಾನುವಾರುಗಳಿಗೆ ಪೌಷ್ಟಿಕ ಮೇವು: ಜಿಲ್ಲೆಯಲ್ಲಿ 600 ಅಜೋಲಾ ಘಟಕ ಸ್ಥಾಪನೆ

ಜಾನುವಾರುಗಳಿಗೆ ಪೌಷ್ಟಿಕ ಮೇವು: ಜಿಲ್ಲೆಯಲ್ಲಿ 600 ಅಜೋಲಾ ಘಟಕ ಸ್ಥಾಪನೆ

ಕಾರವಾರ: ಮಳೆ ಕೊರತೆ ಎದುರಾದಾಗ ಹಸಿರು ಮೇವು ಸಿಗುವುದು ರೈತರಿಗೆ ದೊಡ್ಡ ಸವಾಲು. ಇಂತಹ ಸಂದರ್ಭಗಳಲ್ಲಿ ಜಾನುವಾರುಗಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಲು ಅಜೋಲಾ ಉತ್ತಮ ಪರ್ಯಾಯವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ 600 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.

ಜಿಲ್ಲೆಯ 12 ತಾಲ್ಲೂಕುಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 18.90 ಲಕ್ಷ ರೂ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಇತರ ಪ್ರತಿಕೂಲ ಸಂದರ್ಭಗಳಲ್ಲಿ ಪ್ರೋಟೀನ್, ಖನಿಜಾಂಶ ಸೇರಿದಂತೆ ಉತ್ತಮ ಪೌಷ್ಟಿಕಾಂಶ ಹೊಂದಿರುವ ಅಜೋಲಾವನ್ನು ಜಾನುವಾರುಗಳಿಗೆ ಪೂರಕ ಆಹಾರವಾಗಿ ಬಳಸಬಹುದಾಗಿದೆ.

ಅಜೋಲಾ ಬೆಳೆಯಲು ದೊಡ್ಡ ಜಾಗವೇ ಬೇಕೆಂದಿಲ್ಲ. ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪದಲ್ಲೇ ಕಡಿಮೆ ಸ್ಥಳದಲ್ಲಿ ಘಟಕ ನಿರ್ಮಿಸಬಹುದು. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ತೊಟ್ಟಿಯಲ್ಲಿ ಅಜೋಲಾ ಬೆಳೆಯುವ ವ್ಯವಸ್ಥೆ ಮಾಡಲಾಗುತ್ತದೆ.

ಒಂದು ಘಟಕಕ್ಕೆ 3,150 ರೂ ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ 2,450 ರೂ ಸಾಮಗ್ರಿಗಳ ವೆಚ್ಚ ಹಾಗೂ 700 ರೂ ಕೂಲಿ ವೆಚ್ಚ ಸೇರಿದೆ. ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ 1,350 ರೂ, ಶೇ.80ರಷ್ಟು ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ 650 ರೂ, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ 250 ರೂ ಹಾಗೂ 2 ಕೆಜಿ ಅಜೋಲಾ ಬೀಜಕ್ಕೆ 200 ರೂ ವೆಚ್ಚ ನಿಗದಿಯಾಗಿದೆ. ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಹಾಗೂ ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ 700 ರೂ ನೀಡಲಾಗುತ್ತದೆ.

ಜಿಲ್ಲೆಗೆ ನಿಗದಿಪಡಿಸಿರುವ ಗುರಿಯನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಲಾಗುತ್ತದೆ. ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆದರೆ ಮಾಲಿನ್ಯಕಾರಕಗಳ ಅಪಾಯ ಇರುವುದರಿಂದ ಸ್ವಚ್ಛ ನೀರು ಲಭ್ಯವಿರುವ ಸ್ಥಳಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.

ಆಯ್ಕೆಯಾದ ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿಯನ್ನೂ ನೀಡಲಾಗುತ್ತದೆ.

ರಾಜ್ಯಾದ್ಯಂತ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಒಟ್ಟು 12,000 ಅಜೋಲಾ ಘಟಕಗಳನ್ನು ಸ್ಥಾಪಿಸಲು ಗುರಿ ನಿಗದಿಪಡಿಸಲಾಗಿದ್ದು, ಇದಕ್ಕಾಗಿ 3.78 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ವಿಬಿ-ಜಿ ರಾಮ್ ಜಿ ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯಡಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಪ್ರತಿ ಘಟಕದ ಫಲಾನುಭವಿಯ ವಿವರಗಳು, ಆಧಾರ್ ಮಾಹಿತಿ, ಜಿಪಿಎಸ್ ಸ್ಥಳ ಹಾಗೂ ಘಟಕದ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share