Saturday, May 30, 2026
HomeOthersದೇವರನ್ನು ಹುಡುಕಲು ಬೆಟ್ಟ ಏರಬೇಕಾಗಿಲ್ಲ!

ದೇವರನ್ನು ಹುಡುಕಲು ಬೆಟ್ಟ ಏರಬೇಕಾಗಿಲ್ಲ!

ಬೆಳಿಗ್ಗೆ ದೇವರ ಮುಂದೆ ದೀಪ ಹಚ್ಚಿ, ಸುಗಂಧದ ಊದುಬತ್ತಿ ಹಚ್ಚಿ, ಕೈಮುಗಿದು ನಿಲ್ಲುವವರ ಸಂಖ್ಯೆ ಇಂದು ಕಡಿಮೆಯಿಲ್ಲ. ದೇವಸ್ಥಾನಗಳ ಮುಂದೆ ಸಾಲುಗಳು ಉದ್ದವಾಗುತ್ತಿವೆ.

ಹರಕೆಗಳ ಪಟ್ಟಿ ದೊಡ್ಡದಾಗುತ್ತಿದೆ. ಲಕ್ಷಾಂತರ ರೂಪಾಯಿಗಳ ದಾನ, ಚಿನ್ನದ ಕಿರೀಟ, ಅನ್ನಸಂತರ್ಪಣೆ, ಪೂಜೆ–ಹೋಮಗಳು ದಿನೇದಿನೇ ಹೆಚ್ಚುತ್ತಿವೆ. ಆದರೆ ಅದೇ ಸಮಯದಲ್ಲಿ ಮನುಷ್ಯನ ಮನಸ್ಸಿನೊಳಗಿನ ಮಾನವೀಯತೆ ಏಕೆ ಕಡಿಮೆಯಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡಲೇಬೇಕು.

ಇಂದಿನ ಕಲಿಯುಗದ ವಿಚಿತ್ರವೆಂದರೆ, ತಪ್ಪು ಮಾಡುವುದು ಒಂದು ಕಡೆ, ಅದನ್ನು ದೇವರ ಹೆಸರಿನಲ್ಲಿ ತೊಳೆದುಹಾಕಬಹುದು ಎನ್ನುವ ಭ್ರಮೆ ಮತ್ತೊಂದು ಕಡೆ!

ಕೆಲವರು ಜೀವನಪೂರ್ತಿ ಅನ್ಯಾಯ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ಬೇರೆಯವರ ಕಣ್ಣೀರಿನ ಮೇಲೆ ತಮ್ಮ ಸುಖದ ಅರಮನೆ ಕಟ್ಟುತ್ತಾರೆ. ಆದರೆ ವರ್ಷಕ್ಕೊಮ್ಮೆ ದೊಡ್ಡ ಪೂಜೆ ಮಾಡಿಸಿ, ದೇವಸ್ಥಾನಕ್ಕೆ ದಾನ ಕೊಟ್ಟರೆ ದೇವರು ಕ್ಷಮಿಸಿಬಿಡುತ್ತಾನೆ ಎಂದುಕೊಳ್ಳುತ್ತಾರೆ. “ಪಾಪ ಮಾಡು… ನಂತರ ಪೂಜೆ ಮಾಡು…” ಎಂಬ ಸುಲಭ ಲೆಕ್ಕಾಚಾರದಲ್ಲಿ ಬದುಕು ಸಾಗಿಸುತ್ತಾರೆ.

ಆದರೆ ದೇವರು ಅಷ್ಟು ಸಸ್ತಾ ಅಲ್ಲ! ಅವನಿಗೆ ಬೇಕಾಗಿರುವುದು ಚಿನ್ನದ ಕವಚವಲ್ಲ. ಮನಸ್ಸಿನ ಸ್ವಚ್ಛತೆ. ಅವನಿಗೆ ಇಷ್ಟವಾಗುವುದು ನೈವೇದ್ಯದ ಸಿಹಿಯಲ್ಲ, ನಮ್ಮ ಕರ್ಮದ ಸತ್ಯ.

ಹಸಿದವನಿಗೆ ಅನ್ನ ಕೊಟ್ಟ ಕೈ, ಕಣ್ಣೀರಿನವನಿಗೆ ಧೈರ್ಯ ಹೇಳಿದ ಮಾತು, ಯಾರಿಗೂ ಕಾಣದ ಜಾಗದಲ್ಲಿ ಮಾಡಿದ ಸತ್ಯನಿಷ್ಠ ಕೆಲಸ ಇವೆಲ್ಲವೇ ದೇವರ ನಿಜವಾದ ಪೂಜೆ. ದೇವಸ್ಥಾನದಲ್ಲಿ ಗಂಟೆ ಹೊಡೆಯುವುದಕ್ಕಿಂತ, ಒಬ್ಬನ ಹೃದಯಕ್ಕೆ ನೋವು ಕೊಡದೆ ಬದುಕುವುದು ದೊಡ್ಡ ಧರ್ಮ.

ನಾವು ದೇವರನ್ನು ಬಹಳಷ್ಟು ಬಾರಿ ವ್ಯಾಪಾರಿಯಂತೆ ನೋಡುತ್ತೇವೆ.
ʻಇಷ್ಟು ಕಾಣಿಕೆ ಕೊಟ್ಟೆ… ನನ್ನ ಬೇಡಿಕೆಯನ್ನು ಈಡೇರಿಸು…ʼ ಎನ್ನುವ ಮನೋಭಾವ ಬೆಳೆಸಿಕೊಂಡಿದ್ದೇವೆ. ಆದರೆ ದೇವರು ವ್ಯವಹಾರ ಮಾಡುವವನಲ್ಲ! ಅವನು ನ್ಯಾಯದ ತಕ್ಕಡಿಯಲ್ಲಿ ಜೀವನವನ್ನು ಅಳೆಯುವವನು.

ಒಬ್ಬ ವ್ಯಕ್ತಿ ಪ್ರತಿದಿನ ದೇವಸ್ಥಾನಕ್ಕೆ ಹೋಗಬಹುದು. ಆದರೆ ಮನೆಗೆ ಬಂದು ವೃದ್ಧ ತಾಯ್ತಂದೆಯನ್ನು ಅವಮಾನಿಸುತ್ತಿದ್ದರೆ, ತನ್ನ ಲಾಭಕ್ಕಾಗಿ ಬೇರೆಯವರ ಬದುಕು ಹಾಳು ಮಾಡುತ್ತಿದ್ದರೆ, ಆ ಪೂಜೆಗಳೆಲ್ಲ ಕೇವಲ ಆಚರಣೆಗಳಷ್ಟೇ. ದೇವರು ಅಂತಹ ಭಕ್ತಿಗಿಂತ, ಸತ್ಯವಾಗಿ ಬದುಕುವ ಸಾಮಾನ್ಯ ಮನುಷ್ಯನನ್ನು ಹೆಚ್ಚು ಮೆಚ್ಚುತ್ತಾನೆ.

ಕಲಿಯುಗದಲ್ಲಿ ಮನುಷ್ಯ ಹೆಚ್ಚು ಭಯಪಡಬೇಕಾಗಿರುವುದು ದೇವರ ಬಗ್ಗೆ ಅಲ್ಲ… ತನ್ನ ಪಾಪದ ಪರಿಣಾಮದ ಬಗ್ಗೆಯಷ್ಟೇ. ಅದಕ್ಕಾಗಿಯೇ ತಪ್ಪು ಮಾಡಿದ ಬಳಿಕ ದೇವರ ಮೊರೆ ಹೋಗುತ್ತಾನೆ. ಆದರೆ ದೇವರ ಬಳಿ ಕ್ಷಮೆ ಕೇಳುವುದಕ್ಕಿಂತ ಮೊದಲು, ತನ್ನೊಳಗಿನ ಅಂತರಾತ್ಮವನ್ನು ಎಚ್ಚರಿಸುವುದು ಮುಖ್ಯ.

ನಮ್ಮ ಜೀವನವೇ ಒಂದು ದೇವಸ್ಥಾನವಾದರೆ, ನಮ್ಮ ಕರ್ಮವೇ ಅದರ ದೀಪ.
ಆ ದೀಪ ನಿಷ್ಕಪಟವಾಗಿದ್ದರೆ ದೇವರನ್ನು ಹುಡುಕಲು ಬೆಟ್ಟ ಏರಬೇಕಾಗಿಲ್ಲ.

ನೆನಪಿರಲಿ.
ದೇವರಿಗೆ ನಾವು ಅರ್ಪಿಸುವ ಹೂವು ಒಣಗಬಹುದು. ಆದರೆ ನಾವು ಮಾಡುವ ಒಳ್ಳೆಯ ಕರ್ಮದ ಪರಿಮಳ ಮಾತ್ರ ಕಾಲ ಕಳೆದರೂ ಅಳಿಯದು.

– ಸೌಪರ್ಣಿಕಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share