ಹೊನ್ನಾವರ: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳುವಾಗಿರುವ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ದೇವಸ್ಥಾನಕೇರಿ ನಿವಾಸಿ ಪಾರ್ವತಿ ನಾರಾಯಣ ಪಟಗಾರ (35) ಅವರು ನೀಡಿದ ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 20ರ ರಾತ್ರಿ 8 ಗಂಟೆಯಿಂದ ಜೂನ್ 7ರ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಅವರ ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್ನೊಳಗಿನ ಬೀಗ ಹಾಕಿದ ಪೆಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನಾಭರಣಗಳು ಮತ್ತು ನಗದು ಹಣ ಕಳುವಾಗಿವೆ.
ಕಳುವಾದ ವಸ್ತುಗಳಲ್ಲಿ 40 ಗ್ರಾಂ ತೂಕದ ಮಂಗಳಸೂತ್ರ, 15 ಗ್ರಾಂ ತೂಕದ ಮತ್ತೊಂದು ಕರಿಮಣಿ ಮಂಗಳಸೂತ್ರ, 20 ಗ್ರಾಂ ತೂಕದ ನೆಕ್ಲೆಸ್, 35 ಗ್ರಾಂ ತೂಕದ ಹವಳದ ಸರ, ಎರಡು ಮಕ್ಕಳ ಚೈನ್ಗಳು, ಐದು ಚಿಕ್ಕ ಉಂಗುರಗಳು ಸೇರಿದಂತೆ ಒಟ್ಟು 128 ಗ್ರಾಂ ಚಿನ್ನಾಭರಣಗಳಿದ್ದು, ಅವುಗಳ ಅಂದಾಜು ಮೌಲ್ಯ ₹12.80 ಲಕ್ಷ ಎಂದು ತಿಳಿಸಲಾಗಿದೆ. ಇದರ ಜೊತೆಗೆ ₹50 ಸಾವಿರ ನಗದು ಹಣವೂ ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನಕೇರಿ ನಿವಾಸಿ ಧನುಶ್ ಶ್ರೀಧರ ಗೌಡ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿರುವ ಪಾರ್ವತಿ ಪಟಗಾರ, ಆತನನ್ನು ವಿಚಾರಣೆ ನಡೆಸಿ ಕಳುವಾದ ಚಿನ್ನಾಭರಣ ಹಾಗೂ ನಗದು ಹಣವನ್ನು ಪತ್ತೆಹಚ್ಚಿಕೊಡಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.