Friday, July 24, 2026
Join WhatsApp Group
HomeLocal Storyಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ!

ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ!

…… “ಆರಕ್ಷಕ ಠಾಣೆಯಲ್ಲಿ ಪ್ರಕರಣವಾದರಲ್ಲವೇ ಶಿಕ್ಷೆಯಾಗುವುದು, ಕಂಬಿ ಎಣಿಸುವುದು! ಕಲಿಯುಗವಲ್ಲವೇ ಪ್ರಭೂ. ಅದಕ್ಕಾಗಿಯೇ ನಾನು ಹೇಳುವುದು, ಭೂಲೋಕದಲ್ಲಿ ನ್ಯಾಯದ ಚಕ್ರ ತಿರುಗುತ್ತದೆ, ಆದರೆ ಕೆಲವೊಮ್ಮೆ ಅದರ ಅಚ್ಚಿಗೆ ಎಣ್ಣೆ ಹಚ್ಚುವವರು ಬೇರೆ ಇರುತ್ತಾರೆ. ಎಲ್ಲರೂ ಸೇರಿ ಸತ್ಯವನ್ನೇ ಹೆದರಿಸಿದರು…!”

“ಹೇಳಿಕೇಳಿ ರಾಜಕೀಯದಲ್ಲಿದ್ದವನು. ಚಾಲ್ತಿಯಲ್ಲಿರುವ ಪದಾಧಿಕಾರಿಯೂ ಹೌದು. ಮಾತಾ-ಪಿತೃಗಳೂ ರಾಜಕೀಯದ ಗಂಧ-ಗಾಳಿಯಿದ್ದವರು. ಪಕ್ಷದ ದೊಡ್ಡ ದೊಡ್ಡ ಮುಖಂಡರು ಇಲ್ಲಾಪುರ ಪಟ್ಟಣಕ್ಕೆ ಬಂದಾಗ ಇವರ ಮನೆಗೆ ಭೇಟಿ ನೀಡಿ, ನೀರು ಕಾಯಿಸಿ ಒಂದು ಬಿಸಿಬಿಸಿಯಾದ ಚಹಾ ಕುಡಿಯದೇ ಹೋಗುವವರಲ್ಲ. ಹೀಗಿರುವಾಗ ಕಂಬಿಯೆಣಿಸಲು ಬಿಟ್ಟಾರೆಯೇ, ಪಕ್ಷದ ಮರ್ಯಾದೆ ಏನಾದೀತು? ಸನಾತನ ಪಕ್ಷದ ಪದಾಧಿಕಾರಿಯ ಹಣೆಬರಹವೇ ಹೀಗಾದರೆ ನಂಬುವುದಾದರೂ ಯಾರನ್ನು ಎಂದು ಜನರು ಕ್ಯಾಕರಿಸಿ ಉಗಿಯುವುದಿಲ್ಲವೇ? ಅವರ ಪಕ್ಷದಲ್ಲಿ ವ್ಯಕ್ತಿ ಮುಖ್ಯವೇ ಅಲ್ಲ ಪ್ರಭೂ!”

“ಸರಿ. ಮುಂದೇನು ಮಾಡಿದರು? ಯುವತಿಯ ಕಡೆಯವರಾದರೂ ಆರಕ್ಷಕ ದೂರು ನೀಡಿರಬೇಕಲ್ಲ?”

ಹಿಂದಿನ ಅಧ್ಯಾಯ ಇಲ್ಲಿ ಓದಿ: https://canaranext.com/?p=3839

 “ದೂರು ನೀಡುವ ಹಂತಕ್ಕೆ ತಲುಪಿರುವ ವಿಷಯವೇ ಪ್ರಭೂ. ಆದರೆ, ತಮ್ಮ ಮಗಳ ಭವಿಷ್ಯ ಪಾಲಕರನ್ನು ಕಾಡತೊಡಗಿತು. ಕ್ಷೀರ ಕೇಂದ್ರದ ಕಟ್ಟೆ ಕಾಯಿಸುವಾಗ ತಮ್ಮ ಮಗಳ ವಿಷಯ ಆಡುವವರ ಬಾಯಿಗೆ ಗ್ರಾಸವಾಗಬಹುದು. ವೃತ್ತ ಪತ್ರಿಕೆಗಳಲ್ಲೂ ಸುದ್ದಿ ಬಿತ್ತರವಾದೀತು. ಮಾಡುವುದೇನು…ಪಾಲಕರು ಚಿಂತೆಯಲ್ಲಿ ಮುಳುಗಿದರು.”

“ಅಷ್ಟಾದ ನಂತರ ನೇರ ಹೊರಟಿದ್ದು ತಮ್ಮ ಸಮಾಜದ, ಪಕ್ಷದ ಮುಖಂಡರ ಬಳಿಗೆ, ರಾಜಿ ಪಂಚಾಯಿತಿಗೆ. ಕೆಲವರು ರಾಜಿ ಪಂಚಾಯಿತಿಯ ಗಂಗೆಯಲ್ಲಿ ಎಲ್ಲವನ್ನೂ ತೊಳೆದುಬಿಡುತ್ತಾರೆ.”

ಭಗವಾನ್ ನಿಟ್ಟುಸಿರು ಬಿಟ್ಟ. “ನಾರದಾ, ಇದು ಕಲಿಯುಗದ ವಿಚಿತ್ರ ರೋಗ. ತಪ್ಪು ಮಾಡಿದವರಿಗಿಂತ, ತಪ್ಪನ್ನು ಹೇಳಲು ಹೆದರಿದವರ ಸಂಖ್ಯೆ ಹೆಚ್ಚಾಗಿದೆ. ಮುಂದೆ?”

“ಮುಂದೇನು ಪ್ರಭೂ. ಸನಾತನ ಪಕ್ಷದ ಇಲ್ಲಾಪುರ ಹಿರಿಯಣ್ಣ, ಭುಜಂಗರಾಜ, ಶಿವಶಂಕರ ಮುಂತಾದವರೆಲ್ಲರೂ ಸೇರಿ ಪಟ್ಟಣದ ಮೂರ್ನಾಲ್ಕು ಕಿ.ಮೀ ಅಂತರದಲ್ಲಿರುವ ಪ್ರಕೃತಿ ಗೃಹದಲ್ಲಿಸಭೆ ಸೇರಿದರು. ಈತ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟಿದ್ದಾನೆ. ಆರಕ್ಷಕ ಠಾಣೆಗೆ ಹೋಗಿ ದೂರು ಕೊಡಲು ಯುವತಿಯ ಪಾಲಕರೇ ಸಿದ್ಧರಿಲ್ಲ. ಇನ್ನೇನು ಮಾಡುವುದು ಎಂದು ಹಿರಿತಲೆಗಳೆಲ್ಲವೂ ಚರ್ಚಿಸಿದ್ದಾಯ್ತು ಪ್ರಭೂ. ಕೊನೆಯಲ್ಲಿ ಒಂದು ತೀರ್ಮಾನಕ್ಕೂ ಬಂದರು.”

“ಬಿಳಿಯ ಹಾಳೆಯ ಮೇಲೆ, ಆರಕ್ಷಕರ ಕೈಗಿಡಲು ಈತನಿಂದ ಒಂದು ಮುಚ್ಚಳಿಕೆ ಬರೆಯಿಸಿಕೊಂಡರು. ಕೆರೆಯ ದಡದಲ್ಲಿರುವ ಶಾರದಾಮಾತೆಯ ಸನ್ನಿಧಿಯಲ್ಲಿ ಈ ಪರರ ದೀಪನನ್ನೂ, ಪಾಲಕರನ್ನೂ ಕರೆಯಿಸಿಕೊಂಡರು. ಆ ಸನ್ನಿವೇಶವಾದರೂ ಹೇಗಿತ್ತು ಪ್ರಭೂ! ಸುತ್ತಲೂ ಗಾಢ ಅಂಧಕಾರ, ತಾರಸಿಯ ಮೇಲೊಂದಿಷ್ಟು ಮುಖಂಡರು, ಈ ಪರರ ದೀಪನ ಬಾಯಿಯಿಂದ ಕ್ಷಮೆ ಕೇಳಿಸಿ ಕಪ್ಪು ಬಿಳುಪಿನ ವಿಡಿಯೋವನ್ನೂ ದಾಖಲಿಸಿಕೊಂಡರು. ಆದರೇನು ಮಾಡುವುದು ಪ್ರಭೂ, ಈ ಪ್ರೇತಾತ್ಮದ ಮುಖವೇ ಕಾಣುತ್ತಿಲ್ಲವೇ!”

“ಲಕ್ಷ್ಮೀ ಕಟಾಕ್ಷವೊಂದಿದ್ದರೆ ಕೊಲೆಗಡುಕರು, ತಲೆಹಿಡುಕರು, ಮನೆಹಾಳರು ಎಲ್ಲರೂ ಮೆರೆಯುವ ಕಾಲದಲ್ಲಿ ಇದ್ಯಾವ ಪ್ರಕರಣ ಶ್ರೀಹರಿ. ಪಕ್ಷದ ಆರ್ಥಿಕ ಬಲವರ್ಧನೆಗೆ ಒಂದಿಷ್ಟು ವಹಿವಾಟು ನಡೆಯಿತು. ಅವರೊಂದಿಷ್ಟು ಪಡೆದರು, ಇವರೊಂದಿಷ್ಟು ಪಡೆದರು. ಕೆಲ ಸುದ್ದಿದೂತರೂ ಒಂಚೂರು ಕಣ್ಣಾಡಿಸಿದರು. ನನಗೇನೂ ಗೊತ್ತಿಲ್ಲವೆಂದರು. ಟೈಂ ಟೈಂ ಗೆ ಸರಿಯಾಗಿ ಬರುವ ಮೊಬೈಲ್ ನ್ಯೂಸಿನಲ್ಲಿ ʻಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆʼ ಎಂದು ಬರೆಯಿಸಲಾಯಿತು ಪ್ರಭೂ. ಅಲ್ಲಿ ಈ ಮೊದಲು ಕೆಲಸಕ್ಕಿದ್ದವರೂ ಒಬ್ಬೊಬ್ಬರೇ ಹೊರಬಿದ್ದರು. ಅರಿವಿಲ್ಲದೆ ಸೇರಿದವರು ಕಷ್ಟ ಅನುಭವಿಸಿದರು. ಬರುವ ಮಕ್ಕಳ ಮೇಲೆಯೂ ಆತನ ಕೆಟ್ಟ ಕಣ್ಣು ಬಿದ್ದ ವಿಷಯ ಊರಿಗೆ ಗೊತ್ತಾಯಿತು. ಆದರೂ, ʻಯುವತಿಯರು ಕೆಲಸಕ್ಕೆ ಬೇಕಾಗಿದ್ದಾರೆʼ ಎಂಬ ಹಲುಬಾಟ ಮಾತ್ರ ನಿಲ್ಲಲಿಲ್ಲ. ಅಲ್ಲಿಗೆ ಮುಗಿಯಿತು ಪ್ರಭೂ”

“ಮತ್ತೆ ಪರರ ದೀಪನ ಗಣಕ ಗುಹೆಯೇನಾಯ್ತು ನಾರದಾ? ಬಾಗಿಲು ಹಾಕಿತೇ?”

“ಛೆ ಛೇ…! ಎಲ್ಲಾದರೂ ಉಂಟೇ ಪ್ರಭೂ. ಆತನಲ್ಲಿ ಏನೂ ಬದಲಾವಣೆಯಾಗಿಲ್ಲ. ಇಂದಿಗೂ ಆತನ ಗಣಕ ಕೇಂದ್ರದಲ್ಲಿ ʻಹುಡುಗಿಯರು ಕೆಲಸಕ್ಕೆ ಬೇಕಾಗಿದ್ದಾರೆʼ ಎಂಬ ಫಲಕ ರಾರಾಜಿಸುತ್ತಿದೆ. ಯಾಕೆ ಪ್ರಭೂ ಈ ತಾರತಮ್ಯ? ಹುಡುಗರು ಕೆಲಸ ಮಾಡಲಾರರೇ? ಆತನಿಗೆ ಬೇಕಾಗಿರುವುದು ಕೆಲಸಗಾರರಲ್ಲ ಪ್ರಭೂ, ಸುತ್ತ ಯುವತಿಯರ ಒಡ್ಡೋಲಗ ಬೇಕು! ಅಂತಾದರೆ, ಆತ ಬದಲಾದನೇ?! ಪಕ್ಷದ ಪದಾಧಿಕಾರಿಯಾಗಿಯೂ ಮುಂದುವರೆಯುತ್ತಿದ್ದಾನೆ. ಅಂತಾದರೆ, ಜನರಿಗೆ ಹೇಳಿಕೊಂಡು ತಿರುಗುವ ಸಿದ್ಧಾಂತಕ್ಕೂ, ನಡವಳಿಕೆಗೂ ಹೋಲಿಕೆ ಬೇಡವೆಂದಾಯ್ತಲ್ಲ ಪ್ರಭೂ!”

ಶ್ರೀಮನ್ನಾರಾಯಣ ಮಂದಹಾಸ ನಕ್ಕ.

 “ತಮ್ಮ ಮಕ್ಕಳನ್ನು ವಿದ್ಯಾಸಂಸ್ಥೆಗೆ ಕಳುಹಿಸುವ ಪಾಲಕರು ಮೊದಲು ಸಂಸ್ಥೆಯ ಹೆಸರು ನೋಡುವುದಕ್ಕಿಂತ ಅದರ ವಾತಾವರಣ ನೋಡಬೇಕು. ಫಲಕದಲ್ಲಿ ‘ಯುವತಿಯರು ಬೇಕಾಗಿದ್ದಾರೆ’ ಎಂದು ಶಾಶ್ವತವಾಗಿ ಬರೆದಿದ್ದರೆ, ಅಲ್ಲಿ ಜ್ಞಾನಕ್ಕಿಂತ ಬೇರೆ ಯಾವುದೋ ವ್ಯಾಪಾರ ನಡೆಯುತ್ತಿದೆಯೇ ಎಂದು ಪ್ರಶ್ನಿಸಬೇಕು.”

 “ನಾರಾಯಣ! ನಾರಾಯಣ! ಹಾಗಾದರೆ ಇಂಥ ಪ್ರೇತಾತ್ಮಗಳನ್ನು ಓಡಿಸುವ ಮಂತ್ರ ಯಾವುದು?”

“ಬಹಳ ಸುಲಭ. ಎಚ್ಚರಿಕೆಯೇ ಮಂತ್ರ. ಪ್ರಶ್ನಿಸುವುದೇ ಯಜ್ಞ. ಮೌನ ಮುರಿಯುವುದೇ ಆಯುಧ.”

“ಹಾಗಾದರೆ ಪಾಲಕರಿಗೆ ಏನು ಸಂದೇಶ ಕೊಡಲಿ ಶ್ರೀಹರಿ?”

“ಗಣಕ ಕೇಂದ್ರದ ಬಣ್ಣದ ಫಲಕ, ಆಕರ್ಷಕ ಸಂಬಳದ ಆಮಿಷ ನೋಡಿ ಮೋಹಗೊಳ್ಳಬೇಡಿ. ನಿಮ್ಮ ಮಕ್ಕಳ ಸುರಕ್ಷತೆ, ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ತರಬೇತುದಾರರ ನಡವಳಿಕೆ ಬಗ್ಗೆ ತಿಳಿದುಕೊಳ್ಳಿ. ಗೋಮುಖ ವ್ಯಾಘ್ರಗಳು ಎಲ್ಲ ಯುಗದಲ್ಲೂ ಇರುತ್ತವೆ. ಆದರೆ ಜಾಗೃತ ಸಮಾಜ ಇದ್ದರೆ ಅವುಗಳ ಆಟ ನಡೆಯುವುದಿಲ್ಲ.”

ನಾರದಮುನಿ ತಕ್ಷಣ ತನ್ನ ವೀಣೆಯನ್ನು ಹೆಗಲಿಗೇರಿಸಿಕೊಂಡು ಭೂಲೋಕದತ್ತ ಹೊರಟ.

ಹೋಗುತ್ತಾ ಒಂದೇ ಮಾತು ಹೇಳುತ್ತಿದ್ದ:

“ನಾರಾಯಣ… ನಾರಾಯಣ…!
ಕಂಪ್ಯೂಟರ್ ಕಲಿಸುವವನು ಕಂಪ್ಯೂಟರ್‌ನ್ನೇ ಕಲಿಸಲಿ.
ಬೇರೆಯ ಪಾಠಗಳ ಬಗ್ಗೆ ಪಾಲಕರು ಎಚ್ಚರವಾಗಿರಲಿ…!”

ಸದರಿ ಪುರಾಣ ಸರಣಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನಷ್ಟೇ ಹೊಂದಿದೆ. ಕಥೆ ಕಾಲ್ಪನಿಕವೇ ಆಗಿದ್ದರೂ, ಕೆಲ ಘಟನೆಗಳು, ವ್ಯಕ್ತಿಗಳ ಪರಿಚಯದೊಂದಿಗೆ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ. ಇಂತಹ ಹೋಲಿಕೆಗೆ ಲೇಖಕನಾಗಲೀ, ಕೆನರಾ ನೆಕ್ಸ್ಟ್‌ ವಾಹಿನಿಯಾಗಲೀ ಜವಾಬ್ದಾರಿಯಲ್ಲ.

ನಾರದರ ಮುಂದಿನ ಪಯಣ: ಇಲ್ಲಾಪುರದ ಎರಡು ಕಾಲಿನ ಕರಡಿ ಮಾಡಿದ ಕಿತಾಪತಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share