Friday, July 24, 2026
Join WhatsApp Group
HomeInformationSpecialನಿಮ್ಮ ಮೆದುಳಿಗೆ ಒಂದಿಷ್ಟು ಕೆಲಸ ಕೊಡಿ!

ನಿಮ್ಮ ಮೆದುಳಿಗೆ ಒಂದಿಷ್ಟು ಕೆಲಸ ಕೊಡಿ!

ಕೇವಲ AI ನಂಬಿ ಬದುಕಿದರೆ ನಿಮ್ಮ ಮೆದುಳು 2g ನೆಟ್‌ವರ್ಕ್‌ನಂತೆ ಆದೀತು ಹುಷಾರು!

ಇತ್ತೀಚೆಗೆ  30 ವರ್ಷದ ಐಟಿ ಪ್ರೊಫೆಷನಲ್ ಒಬ್ಬರು ನನ್ನಲ್ಲಿ ತಪಾಸಣೆಗೆ ಬಂದಿದ್ದರು. ಅವರ ಪ್ರೊಫೈಲ್ ನೋಡಿದರೆ ಕ್ಲಾಸಿಕ್ ‘ಟಾಪ್-ಅಚೀವರ್ʼ ತರಹ ಇತ್ತು. ಹೈ-ಪೇಯಿಂಗ್ ಜಾಬ್, ಸಖತ್ ಸ್ಮಾರ್ಟ್, ಅಪ್‌ಡೇಟೆಡ್ ಲೈಫ್‌ಸ್ಟೈಲ್. ಆದರೆ, ಅವರ ಕಣ್ಣುಗಳಲ್ಲಿ ವಿಪರೀತ ಆತಂಕ ಎದ್ದು ಕಾಣುತ್ತಿತ್ತು.

 ಅವರು ಮಾತನಾಡಲು ಶುರು ಮಾಡಿದಾಗ ಒಂದು ವಿಚಿತ್ರ ಪ್ಯಾಟರ್ನ್ ಗಮನಿಸಿದೆ. ಮಾತನಾಡುತ್ತಾ ಮಧ್ಯದಲ್ಲೇ ದಿಢೀರನೆ ಬ್ರೇಕ್ ಹಾಕುತ್ತಿದ್ದರು. ಯಾವುದೋ ಕಷ್ಟದ ಟೆಕ್ನಿಕಲ್ ಶಬ್ದ ಅಲ್ಲ, “ಕಾಫಿ ಕಪ್”, “ಮೀಟಿಂಗ್ ರೂಮ್”, “ಶೆಡ್ಯೂಲ್” ನಂತಹ ತೀರಾ ಕಾಮನ್ ಪದಗಳಿಗಾಗಿ ತಡಕಾಡುತ್ತಿದ್ದರು. ಅವರ ಮೆದುಳು 2G ನೆಟ್‌ವರ್ಕ್‌ನಂತೆ ಪದೇ ಪದೇ ಸ್ಟ್ರಕ್ ಆಗುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಅವರು ಹೇಳಿದ ಒಂದು ಮಾತು ಓರ್ವ ವೈದ್ಯೆಯಾಗಿ ನನ್ನನ್ನು ಯೋಚಿಸುವಂತೆ  ಮಾಡಿತು: “ಡಾಕ್ಟರ್, ಇತ್ತೀಚೆಗೆ ನನಗೆ ಮಾಮೂಲಿ ಪದಗಳೇ ಮರೆತುಹೋಗ್ತಿವೆ. ಬೆಳಗ್ಗಿನ ಇಮೇಲ್‌ನಿಂದ ಹಿಡಿದು, ಆಫೀಸ್ ಕೋಡಿಂಗ್, ಪ್ರೆಸೆಂಟೇಶನ್, ಕೊನೆಗೆ ವಾಟ್ಸಾಪ್ ರಿಪ್ಲೈವರೆಗೂ ಪ್ರತಿಯೊಂದಕ್ಕೂ ನಾನು AI ಟೂಲ್ಸ್ ಮೇಲೆ ಡಿಪೆಂಡ್ ಆಗಿಬಿಟ್ಟಿದ್ದೀನಿ. ಈಗ ಆ ಸ್ಕ್ರೀನ್ ಇಲ್ಲದಿದ್ದರೆ ನನ್ನ ಸ್ವಂತ ಮೆದುಳು ಹ್ಯಾಂಗ್ ಆದ ಹಾಗೆ ಅನಿಸುತ್ತೆ!”

ಬರವಣಿಗೆ, ಕ್ರಿಯೇಟಿವ್ ಥಿಂಕಿಂಗ್, ಕಮ್ಯುನಿಕೇಶನ್ ಎಲ್ಲವನ್ನೂ AI ಎಂಬ ‘ಬಾಹ್ಯ ಮೆದುಳಿಗೆ’ ಔಟ್‌ಸೋರ್ಸ್ ಮಾಡಿಬಿಟ್ಟಿದ್ದರು ಅವರು. ಪರಿಣಾಮ? ಅವರ ಆಂತರಿಕ ಮೆದುಳಿನ ನರಗಳು ಕೆಲಸ ಮಾಡದೆ ಜಿಮ್‌ಗೆ ಹೋಗದ ಬಾಡಿಯಂತೆ ವೀಕ್ ಆಗತೊಡಗಿದ್ದವು.

ಕ್ಯಾಲ್ಕುಲೇಟರ್ ಎಫೆಕ್ಟ್: ಹಿಂದೆ  ನಾವು ಶಾಲೆಯಲ್ಲಿದ್ದಾಗ ಶಿಕ್ಷಕರು ಒಂದು ಮಾತು ಹೇಳುತ್ತಿದ್ದರು.“ಯಾವಾಗಲೂ ಕೈಯಲ್ಲಿ ಕ್ಯಾಲ್ಕುಲೇಟರ್ ಇರಲ್ಲ, ಹಾಗಾಗಿ ಮಗ್ಗಿ ಕಲಿಯಿರಿ.” ಸ್ಮಾರ್ಟ್‌ಫೋನ್ ಬಂದ ಮೇಲೆ ಆ ಮಾತು ಸುಳ್ಳಾಯ್ತು ನಿಜ. ಆದರೆ, ಮೆಡಿಕಲ್ ಮತ್ತು ಸೈಕಾಲಜಿಕಲ್ ದೃಷ್ಟಿಕೋನದಿಂದ ನೋಡಿದರೆ ಆ ಶಿಕ್ಷಕರು ಹೇಳಿದ್ದು ನೂರಕ್ಕೆ ನೂರು ಸತ್ಯ! ನಾವು ಯಾವುದನ್ನು ಬಳಸುವುದನ್ನು ನಿಲ್ಲಿಸುತ್ತೇವೋ, ಅದನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಇದನ್ನು ಜೀವಶಾಸ್ತ್ರದಲ್ಲಿ Use and disuse theory ಎನ್ನುತ್ತೇವೆ.

ನಾವು ಎತ್ತ ಸಾಗುತ್ತಿದ್ದೇವೆ?

ಮೆದುಳಿನ ಆಲಸ್ಯ: ಪ್ರತಿಯೊಂದಕ್ಕೂ ರೆಡಿಮೇಡ್ ಉತ್ತರ ಸಿಕ್ಕಾಗ, ನಮ್ಮ ಮೆದುಳು ಹೊಸ ನ್ಯೂರಲ್ ಕನೆಕ್ಷನ್ಗಳನ್ನು  ಸೃಷ್ಟಿಸುವುದನ್ನೇ ನಿಲ್ಲಿಸಿಬಿಡುತ್ತದೆ.

ಡಿಜಿಟಲ್ ಡಿಮೆನ್ಶಿಯಾ: ಯುವ ಪೀಳಿಗೆಯಲ್ಲಿ ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

AI ನಮ್ಮ ಕೆಲಸವನ್ನು ಸುಲಭಗೊಳಿಸುವ ಅತ್ಯುತ್ತಮ ‘ಅಸಿಸ್ಟೆಂಟ್’ ಆಗಬೇಕೇ ಹೊರತು, ನಮ್ಮ ಮೆದುಳಿನ ‘ಬಾಸ್’ ಆಗಬಾರದು. ತಂತ್ರಜ್ಞಾನವನ್ನು ಸ್ಮಾರ್ಟ್ ಆಗಿ ಬಳಸಿ, ಆದರೆ ಯೋಚಿಸುವ ಜವಾಬ್ದಾರಿಯನ್ನು ಮಾತ್ರ ನಿಮ್ಮ ಮೆದುಳಿಗೇ ಬಿಡಿ!

AI ಬಳಕೆಯಿಂದಲೇ ಮೆದುಳು ನಿಷ್ಕ್ರಿಯಗೊಳ್ಳುತ್ತದೆ ಎಂಬುದಕ್ಕೆ ಇನ್ನೂ ಪೂರ್ಣ ಪ್ರಮಾಣದ ದೀರ್ಘಕಾಲೀನ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅತಿಯಾದ ಅವಲಂಬನೆ ಮಾನಸಿಕ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸತ್ಯ ತಾನೇ?

ನಿಮ್ಮ ದಿನನಿತ್ಯದ ಬದುಕಿನಲ್ಲಿ ನೀವೂ ಇಂಥದ್ದೇನಾದರೂ ಅನುಭವಿಸಿದ್ದೀರಾ? ನಿಮ್ಮ ಮೆದುಳಿಗೆ ನೀವೆಷ್ಟು ಕೆಲಸ ಕೊಡ್ತಿದ್ದೀರಾ?

– ಡಾ ಸೌಮ್ಯ ಕೆ.ವಿ. ತಜ್ಞ ವೈದ್ಯರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share