ಯುವಕನ ಬದುಕು ಅಂತ್ಯ; ಇಬ್ಬರಿಗೆ ಗಂಭೀರ ಗಾಯ
ಶಿರಸಿ: ಶಿರಸಿ–ಸಿದ್ದಾಪುರ ರಾಜ್ಯ ಹೆದ್ದಾರಿಯ ಅಜ್ಜಿಬಳ ಗ್ರಾಮದ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜುಲೈ 24ರಂದು ರಾತ್ರಿ ಸುಮಾರು 9.15ರ ವೇಳೆಗೆ ಶಿರಸಿಯಿಂದ ಸಿದ್ದಾಪುರದ ಕಡೆಗೆ ಕೆಎ-43/ಯು-6233 ಸಂಖ್ಯೆಯ ಬೈಕ್ನಲ್ಲಿ ತೆರಳುತ್ತಿದ್ದ ಸಿಂದೂರ ಸದಾನಂದ ಹೆಗಡೆ (21) ಹಾಗೂ ಸಿದ್ದಾಪುರದಿಂದ ಶಿರಸಿಯತ್ತ ಕೆಎ-31/ಇಎಫ್-8331 ಸಂಖ್ಯೆಯ ಬೈಕ್ನಲ್ಲಿ ಮತ್ತೋರ್ವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದ ಗಿರೀಶ ರಾಮಗೌಡ (26) ಅವರ ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.
ಅಪಘಾತದ ತೀವ್ರತೆಗೆ ಸಿಂದೂರ ಹೆಗಡೆ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ ಸವಾರ ಗಿರೀಶ ಹಾಗೂ ಹಿಂಬದಿ ಸವಾರಿಗೂ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಬೈಕ್ಗಳು ಅಪಘಾತದಲ್ಲಿ ಜಖಂಗೊಂಡಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಎರಡೂ ಬೈಕ್ಗಳು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.