ಭಾರತೀಯ ಇತಿಹಾಸದಲ್ಲಿ ಜುಲೈ 26 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಮತ್ತು ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ದಿನ. 1999ರ ಜುಲೈ 26ರಂದು ಭಾರತೀಯ ಸೇನೆಯು ಲಡಾಖ್‌ನ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಸುದೀರ್ಘವಾಗಿ ನಡೆದ ಯುದ್ಧದಲ್ಲಿ ಐತಿಹಾಸಿಕ ವಿಜಯ ಸಾಧಿಸಿತು.
ಈ ಮಹಾನ್ ಗೆಲುವಿನ ನೆನಪಿಗಾಗಿ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ಸ್ಮರಣಾರ್ಥವಾಗಿ ಪ್ರತಿವರ್ಷ ಈ ದಿನವನ್ನು ‘ಕಾರ್ಗಿಲ್ ವಿಜಯ ದಿವಸ’ ಎಂದು ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ.
1999ರ ಆರಂಭದಲ್ಲಿ, ಹಿಮಾಲಯದ ಕಠಿಣ ಹವಾಮಾನ ಮತ್ತು ಭೌಗೋಳಿಕ ಸವಾಲುಗಳ ಲಾಭ ಪಡೆದ ಪಾಕಿಸ್ತಾನಿ ಪಡೆಗಳು ಹಾಗೂ ಭಯೋತ್ಪಾದಕರು ಲೈನ್ ಆಫ್ ಕಂಟ್ರೋಲ್ (LoC) ದಾಟಿ ಭಾರತದ ಗಡಿಯೊಳಗಿನ ಕಾರ್ಗಿಲ್, ದ್ರಾಸ್ ಮತ್ತು ಬಟಾಲಿಕ್ ವಲಯದ ಪ್ರಮುಖ ಶಿಖರಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು.
ಇದನ್ನು ಅರಿತ ಭಾರತೀಯ ಸೇನೆಯು ದೇಶದ ಗಡಿಯನ್ನು ಮರಳಿ ಪಡೆಯಲು ‘ಆಪರೇಷನ್ ವಿಜಯ್’ ಎಂಬ ಬೃಹತ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ವಾಯುಪಡೆಯು ‘ಆಪರೇಷನ್ ಸಫೇದ್ ಸಾಗರ್’ ಮೂಲಕ ಸೇನೆಗೆ ಬಲವಾದ ಬೆಂಬಲವನ್ನು ನೀಡಿತು.
ಕಾರ್ಗಿಲ್ ಯುದ್ಧವು ಸಾಂಪ್ರದಾಯಿಕ ಯುದ್ಧಗಳಿಗಿಂತ ತೀರಾ ಭಿನ್ನವೂ ಮತ್ತು ಸವಾಲಿನದ್ದೂ ಆಗಿತ್ತು. ಸಮುದ್ರ ಮಟ್ಟದಿಂದ ಸುಮಾರು 18000 ಅಡಿಗೂ ಹೆಚ್ಚಿನ ಎತ್ತರದಲ್ಲಿ, ಮೈನಸ್ ಡಿಗ್ರಿಗಿಂತಲೂ ಕಡಿಮೆ ತಾಪಮಾನದಲ್ಲಿ ಹಾಗೂ ಕಡಿದಾದ ಕಲ್ಲುಬಂಡೆಗಳ ಶಿಖರಗಳ ಮೇಲಿದ್ದ ಶತ್ರುಗಳನ್ನು ಎದುರಿಸುವುದು ಅತ್ಯಂತ ದುರ್ಗಮವಾಗಿತ್ತು. ಶತ್ರುಗಳು ಎತ್ತರದ ಪ್ರದೇಶಗಳಲ್ಲಿದ್ದುಕೊಂಡು ದಾಳಿ ಮಾಡುತ್ತಿದ್ದರೂ, ಭಾರತೀಯ ಯೋಧರು ಧೃತಿಗೆಡದೆ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಅದಮ್ಯ ಸಾಹಸ ಮತ್ತು ದೇಶಭಕ್ತಿಯನ್ನು ಮೆರೆದರು.
ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ನಡೆದ ಈ ಭೀಕರ ಯುದ್ಧದಲ್ಲಿ ಭಾರತೀಯ ಸೇನೆಯು ಶತ್ರುಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸಿ, ಟೈಗರ್ ಹಿಲ್, ತೋಲೋಲಿಂಗ್‌ನಂತಹ ಪ್ರಮುಖ ಶಿಖರಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮರಳಿ ಹಾರಿಸಿತು. ಜುಲೈ 26ರಂದು ಈ ಕಾರ್ಯಾಚರಣೆಯು ಸಂಪೂರ್ಣ ಯಶಸ್ವಿಯಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಈ ಮಹಾನ್ ವಿಜಯವು ಸುಲಭವಾಗಿ ಸಿಕ್ಕಿದ್ದಲ್ಲ. ಮಾತೃಭೂಮಿಯ ರಕ್ಷಣೆಗಾಗಿ ಸುಮಾರು 527ಕ್ಕೂ ಹೆಚ್ಚು ವೀರ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಮತ್ತು ನೂರಾರು ಯೋಧರು ತೀವ್ರವಾಗಿ ಗಾಯಗೊಂಡರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್ ಹಾಗೂ ಸಂಜಯ್ ಕುಮಾರ್ ಅವರಂತಹ ವೀರರ ಸಾಹಸಗಾಥೆಗಳು ಇಂದಿಗೂ ಭಾರತೀಯರ ನೆನಪಿನಲ್ಲಿ ಅಜರಾಮರವಾಗಿ ಉಳಿದಿವೆ.
ಕಾರ್ಗಿಲ್ ವಿಜಯ ದಿವಸವು ಭಾರತೀಯ ಸಶಸ್ತ್ರ ಪಡೆಗಳ ನಿಸ್ವಾರ್ಥ ಸೇವೆ, ಶೌರ್ಯ, ಶಿಸ್ತು ಮತ್ತು ದೇಶಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿವರ್ಷ ಕಾರ್ಗಿಲ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ದೇಶದ ಪ್ರಮುಖ ನಾಯಕರು ಮತ್ತು ಸೇನಾಧಿಕಾರಿಗಳು ಅಮರ ಜವಾನರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.
ನಮ್ಮ ಇಂದಿನ ನೆಮ್ಮದಿಯ ಜೀವನಕ್ಕಾಗಿ ತಮ್ಮ ನಾಳೆಯನ್ನು ತ್ಯಾಗ ಮಾಡಿದ ಆ ವೀರ ಯೋಧರ ಸ್ಮರಣೆ ಮತ್ತು ಅವರ ಕುಟುಂಬಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.
– ಸೌಪರ್ಣಿಕಾ.