Monday, September 7, 2026
Join WhatsApp Group
HomeLocal Storyಹೊಂಡಗಳ ಮಧ್ಯೆ ರಸ್ತೆ ಹುಡುಕಿ!

ಹೊಂಡಗಳ ಮಧ್ಯೆ ರಸ್ತೆ ಹುಡುಕಿ!

ಹೊಂಡಗಳೇ ಹೆದ್ದಾರಿಯ ಹೆಗ್ಗುರುತು; ಬನವಾಸಿ ಭಾಗದಲ್ಲಿ ನಿತ್ಯ ಅಪಘಾತದ ಭೀತಿ

– ಸುಧೀರ ನಾಯರ್

ಬನವಾಸಿ: ಶಿರಸಿ–ಹೊಸನಗರ ರಾಜ್ಯ ಹೆದ್ದಾರಿಯ ಬನವಾಸಿ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡ-ಗುಂಡಿಗಳಿಂದ ಆವೃತವಾಗಿದ್ದು, ಪ್ರತಿನಿತ್ಯ ಸಣ್ಣ-ಪುಟ್ಟ ಹಾಗೂ ಗಂಭೀರ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಶಾಶ್ವತ ದುರಸ್ತಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಪಂಪವನದಿಂದ ವರದಾ ನದಿ ಸೇತುವೆವರೆಗೆ, ಪಂಪ ವೃತ್ತ, ಸೊಸೈಟಿ ಮುಂಭಾಗ, ಕಾಮತ್ ಪೆಟ್ರೋಲ್ ಬಂಕ್, ರಾಮತೀರ್ಥ ಕೆರೆಯ ಬಳಿ, ಕ್ಯಾಂಪ್ಕೋ ಫ್ಯಾಕ್ಟರಿ ಹಾಗೂ ಉಂಚಳ್ಳಿ ಭಾಗದವರೆಗೆ ರಾಜ್ಯ ಹೆದ್ದಾರಿಯ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಬೃಹತ್ ಹೊಂಡಗಳಿಂದ ತುಂಬಿದೆ. ಮಳೆಗಾಲ ಆರಂಭವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ರಸ್ತೆಯ ಮೇಲೆ ಮಳೆ ನೀರು ನಿಲ್ಲುತ್ತಿರುವುದರಿಂದ ಹೊಂಡಗಳು ವಾಹನ ಸವಾರರ ಕಣ್ಣಿಗೆ ಕಾಣದಂತಾಗಿವೆ.

ಇದರಿಂದ ವಾಹನಗಳು ಏಕಾಏಕಿ ಹೊಂಡಗಳಿಗೆ ಇಳಿದು ನಿಯಂತ್ರಣ ತಪ್ಪುವ ಘಟನೆಗಳು ಪದೇಪದೇ ನಡೆಯುತ್ತಿವೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚು ಅಪಾಯ ಎದುರಿಸುತ್ತಿದ್ದು, ಹೊಂಡಗಳನ್ನು ತಪ್ಪಿಸಲು ಹೋಗಿ ಎದುರು ಬರುತ್ತಿರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಅಥವಾ ರಸ್ತೆಗೆ ಬಿದ್ದು ಗಾಯಗೊಳ್ಳುವುದು ನಿತ್ಯದ ಸಂಗತಿ.

ಸೊರಬ, ಶಿಕಾರಿಪುರ, ಹಿರೇಕೆರೂರು, ಸಾಗರ, ಶಿವಮೊಗ್ಗ ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುವ ಶಿರಸಿ–ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ವ್ಯಾಪಾರಸ್ಥರು, ಕೃಷಿ ಉತ್ಪನ್ನ ಸಾಗಿಸುವ ರೈತರು ಸೇರಿದಂತೆ ಸಾವಿರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಪ್ರಯಾಣದ ಅವಧಿ ಹೆಚ್ಚುವುದರ ಜೊತೆಗೆ ವಾಹನಗಳ ನಿರ್ವಹಣಾ ವೆಚ್ಚವೂ ಹೆಚ್ಚುತ್ತಿದೆ ಎಂದು ವಾಹನ ಮಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಂಚಳ್ಳಿ, ಕ್ಯಾಂಪ್ಕೋ, ಗುಡ್ನಾಪುರ, ಬನವಾಸಿ, ಯಡೂರಬೈಲ್, ಕಪ್ಪಗೇರಿ, ತಿಗಣಿ ಹಾಗೂ ಯಡಗೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಲವು ಬಾರಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವುದನ್ನು ಹೊರತುಪಡಿಸಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಪಘಾತ ಸಂಭವಿಸಿದ ಬಳಿಕ ಸ್ಪಂದಿಸುವ ಬದಲು, ಮುಂಜಾಗ್ರತಾ ಕ್ರಮವಾಗಿ ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬನವಾಸಿಯ ಮಧುಕೇಶ್ವರ ದೇವಸ್ಥಾನ, ಸಿಗಂದೂರು ಚೌಡೇಶ್ವರಿ, ಚಂದ್ರಗುತ್ತಿ ರೇಣುಕಾ ದೇವಿ ದೇವಸ್ಥಾನ ಹಾಗೂ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ತೆರಳುವ ನೂರಾರು ಪ್ರವಾಸಿಗರು ಪ್ರತಿದಿನ ಶಿರಸಿ–ಹೊಸನಗರ ರಾಜ್ಯ ಹೆದ್ದಾರಿಯನ್ನೇ ಅವಲಂಬಿಸುತ್ತಾರೆ. ವಾರಾಂತ್ಯ ಹಾಗೂ ಭಾನುವಾರದಂದು ವಾಹನಗಳ ಸಂಚಾರ ಇನ್ನಷ್ಟು ಹೆಚ್ಚಿರುತ್ತದೆ.

ಆದರೆ ಈ ಬೃಹತ್ ಹೊಂಡಗಳು ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಸ್ಥಳೀಯರಿಗೆ ರಸ್ತೆ ಪರಿಸ್ಥಿತಿಯ ಪರಿಚಯವಿದ್ದರೂ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಸವಾರರಿಗೆ ಹೊಂಡಗಳು ಹಾಗೂ ಅಪಾಯಕಾರಿ ತಿರುವುಗಳ ಮಾಹಿತಿ ಇರುವುದಿಲ್ಲ. ಮಳೆ ನೀರಿನಿಂದ ಹೊಂಡಗಳು ಸಂಪೂರ್ಣ ಮುಚ್ಚಿಹೋಗುತ್ತಿರುವುದರಿಂದ ಅಪಘಾತದ ಸಾಧ್ಯತೆ ಮತ್ತಷ್ಟು ಹೆಚ್ಚಿದ್ದು, ಯಾವುದೇ ದುರಂತ ಸಂಭವಿಸುವ ಮುನ್ನವೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಶಿರಸಿ–ಹೊಸನಗರ ರಾಜ್ಯ ಹೆದ್ದಾರಿಯ ಸಂಪೂರ್ಣ ಮರುಡಾಂಬರೀಕರಣಕ್ಕೆ ಆದ್ಯತೆ ನೀಡಿ, ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಂಡು ಹೊಂಡಗಳನ್ನು ಮುಚ್ಚಿ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಹಾಗೂ ವಾಹನ ಸವಾರರ ಆಗ್ರಹ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share