Monday, September 7, 2026
Join WhatsApp Group
HomeInformationSpecialಇಂಥಾ ಇನ್ನೊಂದು ದೇಶ ಭೂಮಿಯ ಮೇಲಿಲ್ಲ!

ಇಂಥಾ ಇನ್ನೊಂದು ದೇಶ ಭೂಮಿಯ ಮೇಲಿಲ್ಲ!

ಒಂದು ದೇಶ ವರ್ಷಕ್ಕೆ ಲಕ್ಷಾಂತರ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ. ಆದರೂ, ಅದು ವಾತಾವರಣಕ್ಕೆ ಬಿಡುವುದಕ್ಕಿಂತ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್‌ನ್ನು ತನ್ನ ಕಾಡುಗಳ ಮೂಲಕ ಹೀರಿಕೊಳ್ಳುತ್ತದೆ. ಹಾಗಾದರೆ ಆ ದೇಶಕ್ಕೆ ‘ಕಾರ್ಬನ್ ನೆಗೆಟಿವ್’ ಎಂಬ ಹೆಸರೇಕೆ ಬರಬಾರದು? ಅಚ್ಚರಿ ಎನಿಸಿದರೂ ಇದು ನಿಜ. ಅದು ಭೂತಾನ್.

ವಿಶ್ವದ ಪರಿಸರವನ್ನು ರಕ್ಷಿಸುವ ಮತ್ತು ಅದರ ಮತ್ತಷ್ಟು ಅವನತಿಯನ್ನು ತಡೆಯುವ ಅಗತ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ‘ಇಂಗಾಲ ತಟಸ್ಥ’ ಎಂಬ ಪದ ಆಗಾಗ ಕೇಳಿಬರುತ್ತಿದೆ. ಹಾಗೆಂದರೇನು? ಸರಳವಾಗಿ ಹೇಳುವುದಾದರೆ, ಒಂದು ದೇಶ ಎಷ್ಟು ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆಯೋ, ಅಷ್ಟೇ ಪ್ರಮಾಣವನ್ನು ಯಾವುದಾದರೂ ರೀತಿಯಲ್ಲಿ ಹೀರಿಕೊಳ್ಳುವ ಅಥವಾ ಸರಿದೂಗಿಸುವ ಪರಿಸ್ಥಿತಿಯೇ ಕಾರ್ಬನ್ ನ್ಯೂಟ್ರಾಲಿಟಿ.

ವಿಶೇಷವೆಂದರೆ, ಜಗತ್ತಿನ ಬಹುತೇಕ ದೇಶಗಳು ಇನ್ನೂ ಆ ಹಂತ ತಲುಪಲು ಹೋರಾಡುತ್ತಿವೆ. ಆದರೆ ಭೂತಾನ್ ಮಾತ್ರ ಇಲ್ಲೊಂದು ಹೆಜ್ಜೆ ಮುಂದೆ ಹೋಗಿದೆ. ಕಾರ್ಬನ್ ನ್ಯೂಟ್ರಲ್ ಆಗುವುದಷ್ಟೇ ಅಲ್ಲ, ಕಾರ್ಬನ್ ನೆಗೆಟಿವ್ ಆಗಿದೆ. ಅಂದರೆ, ದೇಶದಿಂದ ಹೊರಬರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್‌ನ್ನು ಅಲ್ಲಿನ ಪರಿಸರವೇ ಹೀರಿಕೊಳ್ಳುತ್ತಿದೆ. ದಕ್ಷಿಣ ಏಷ್ಯಾದ ಪುಟ್ಟ ಭೂಆವೃತ ದೇಶ ಭೂತಾನ್.

ಸುಮಾರು 38,816 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ದೇಶದ ಜನಸಂಖ್ಯೆ ಕೇವಲ 7.8 ಲಕ್ಷದಷ್ಟು. ಭೂತಾನ್ 17ನೇ ಶತಮಾನದ ಆರಂಭದಲ್ಲಿ ತನ್ನದೇ ಆದ ರಾಜಕೀಯ ಅಸ್ತಿತ್ವವನ್ನು ಪಡೆದುಕೊಂಡಿತು. 20ನೇ ಶತಮಾನದ ಮಧ್ಯಭಾಗದಲ್ಲಿ ಭಾರತದ ಬೆಂಬಲದೊಂದಿಗೆ ಆಧುನೀಕರಣದತ್ತ ಹೆಜ್ಜೆ ಹಾಕಿತು.

ಆದರೆ ಭೂತಾನ್‌ನ್ನು ಜಗತ್ತಿನ ಇತರ ದೇಶಗಳಿಗಿಂತ ವಿಭಿನ್ನವಾಗಿಸುವುದು ಅದರ ರಾಜಕೀಯ ವ್ಯವಸ್ಥೆ ಮಾತ್ರವಲ್ಲ. ಅದು ಅಭಿವೃದ್ಧಿಯನ್ನು ನೋಡುವ ಅದರ ದೃಷ್ಟಿಕೋನ. ಕೃಷಿ ಇನ್ನೂ ಭೂತಾನ್‌ನ ಪ್ರಮುಖ ಉದ್ಯೋಗ ಕ್ಷೇತ್ರ. ಖಾಸಗಿ ವಲಯ ಸಣ್ಣ ಪ್ರಮಾಣದ ಉದ್ಯಮಗಳಿಂದ ಕೂಡಿದೆ. ಕೈಗಾರಿಕಾ ನೆಲೆಯೂ ಸೀಮಿತ. ವ್ಯಾಪಾರದಲ್ಲಿ ನೆರೆಯ ಮತ್ತು ದೀರ್ಘಕಾಲದ ಮಿತ್ರ ಭಾರತವನ್ನು ಭೂತಾನ್ ಹೆಚ್ಚು ಅವಲಂಬಿಸಿದೆ.

ಭಾರತದೊಂದಿಗಿನ ವ್ಯಾಪಾರವೇ ಅದರ ಒಟ್ಟು ವಿದೇಶಿ ವ್ಯಾಪಾರದ ದೊಡ್ಡ ಭಾಗವಾಗಿದೆ. ಆದರೂ ಭೂತಾನ್ ತನ್ನ ಯಶಸ್ಸನ್ನು ಕೇವಲ ಆರ್ಥಿಕ ಬೆಳವಣಿಗೆ, ಜಿಡಿಪಿ ಅಥವಾ ದೇಶದಲ್ಲಿ ಎಷ್ಟು ಅಭಿವೃದ್ಧಿ ನಡೆದಿದೆ ಎಂಬುದರ ಆಧಾರದ ಮೇಲೆ ಅಳೆಯುವುದಿಲ್ಲ. “ಜನರು ಎಷ್ಟು ಸಂತೋಷವಾಗಿದ್ದಾರೆ?” ಇದು ಭೂತಾನ್ ಕೇಳಿಕೊಳ್ಳುವ ಮುಖ್ಯ ಪ್ರಶ್ನೆ. ಇದಕ್ಕಾಗಿಯೇ ಅಲ್ಲಿ ‘ಒಟ್ಟು ರಾಷ್ಟ್ರೀಯ ಸಂತೋಷ’ (Gross National Happiness–GNH) ಎಂಬ ಪರಿಕಲ್ಪನೆಗೆ ಮಹತ್ವವಿದೆ.

1972ರಲ್ಲಿ ಭೂತಾನ್‌ನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು ‘ಒಟ್ಟು ದೇಶೀಯ ಉತ್ಪನ್ನಕ್ಕಿಂತ ಒಟ್ಟು ರಾಷ್ಟ್ರೀಯ ಸಂತೋಷ ಹೆಚ್ಚು ಮುಖ್ಯ’ ಎಂಬ ಕಲ್ಪನೆಯನ್ನು ಮುಂದಿಟ್ಟರು. ಅಂದರೆ ಅಭಿವೃದ್ಧಿ ಎಂದರೆ ಕೇವಲ ಹಣವಲ್ಲ. ಆರೋಗ್ಯ, ಶಿಕ್ಷಣ, ಜೀವನಮಟ್ಟ, ಪರಿಸರ ಮತ್ತು ಸಾಮಾಜಿಕ-ಸಾಂಸ್ಕೃತಿಕ ಬದುಕು ಇವೆಲ್ಲವೂ ಅಭಿವೃದ್ಧಿಯ ಭಾಗವೇ ಎಂಬುದು ಭೂತಾನ್‌ನ ನಿಲುವು.

ಹಾಗಾದರೆ ಪರಿಸರದ ವಿಷಯದಲ್ಲಿ ಭೂತಾನ್ ಇಷ್ಟೊಂದು ಮುಂದೆ ಹೋಗಿದ್ದು ಹೇಗೆ? ಇದಕ್ಕೆ ದೊಡ್ಡ ಕಾರಣ ಕಾಡು. ಭೂತಾನ್‌ನ ಸಂವಿಧಾನವೇ ದೇಶದ ಕನಿಷ್ಠ ಶೇ.60ರಷ್ಟು ಭೂಭಾಗ ಅರಣ್ಯದಿಂದ ಆವೃತವಾಗಿರಬೇಕು ಎಂದು ಹೇಳುತ್ತದೆ. ಆದರೆ ಇಂದು ಅದರ ಶೇ.72ಕ್ಕೂ ಹೆಚ್ಚು ಭಾಗ ಕಾಡಿನಿಂದ ಆವೃತವಾಗಿದೆ. ಇದೀಗ ಲೆಕ್ಕಾಚಾರ ಅರ್ಥವಾಗುತ್ತದೆ. ಭೂತಾನ್ ಪ್ರತಿವರ್ಷ ಸುಮಾರು 1.1 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ.

ಆದರೆ ಅದರ ವಿಶಾಲವಾದ ಕಾಡುಗಳು ಅದಕ್ಕಿಂತ ಹೆಚ್ಚಿನ ಪ್ರಮಾಣದ CO₂ ಅನ್ನು ಹೀರಿಕೊಳ್ಳುತ್ತವೆ. ಹೀಗಾಗಿ ದೇಶದ ಒಟ್ಟಾರೆ ಕಾರ್ಬನ್ ಲೆಕ್ಕಾಚಾರ ಋಣಾತ್ಮಕವಾಗುತ್ತದೆ. ಇದು ಮಾತ್ರವಲ್ಲ. ಭೂತಾನ್ ತನ್ನ ವೇಗವಾಗಿ ಹರಿಯುವ ನದಿಗಳನ್ನೂ ಅಭಿವೃದ್ಧಿಯ ಭಾಗವನ್ನಾಗಿ ಮಾಡಿಕೊಂಡಿದೆ. ದೇಶದಲ್ಲಿ ಜಲವಿದ್ಯುತ್‌ಗೆ ಅಪಾರ ಅವಕಾಶವಿದ್ದು, ನದಿಗಳ ನೀರಿನಿಂದ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜಲವಿದ್ಯುತ್ ಬಳಕೆಯ ಹೆಚ್ಚಳವೂ ಇತರ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನೆರವಾಗುತ್ತಿದೆ.

 ಒಂದು ಕಡೆ ಅಭಿವೃದ್ಧಿ. ಮತ್ತೊಂದು ಕಡೆ ಕಾಡು. ಇನ್ನೊಂದು ಕಡೆ ಸ್ವಚ್ಛ ಇಂಧನ. ಇವೆಲ್ಲವನ್ನೂ ಒಟ್ಟಿಗೆ ಸಾಗಿಸುವ ಪ್ರಯತ್ನವೇ ಭೂತಾನ್‌ನ ವಿಶೇಷತೆ. ಇಲ್ಲಿ ಒಂದು ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಅಭಿವೃದ್ಧಿ ಎಂದರೆ ಕಾಡುಗಳನ್ನು ಕಡಿದು ಕಟ್ಟಡಗಳನ್ನು ನಿರ್ಮಿಸುವುದೇ? ಆರ್ಥಿಕ ಬೆಳವಣಿಗೆ ಎಂದರೆ ಪ್ರಕೃತಿಯ ಮೇಲೆ ಮತ್ತಷ್ಟು ಹೊರೆ ಹಾಕುವುದೇ? ಭೂತಾನ್ ಅದಕ್ಕೆ ಬೇರೆ ರೀತಿಯ ಉತ್ತರವನ್ನು ನೀಡುತ್ತಿರುವಂತೆ ಕಾಣುತ್ತದೆ. ಪ್ರಪಂಚದ ಹಲವು ದೇಶಗಳು ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಒಂದರ ಮೇಲೊಂದು ಒತ್ತಡ ಹೇರುತ್ತಿರುವಾಗ, ಪುಟ್ಟ ಭೂತಾನ್ ಮಾತ್ರ “ಪ್ರಕೃತಿಯನ್ನು ಉಳಿಸಿಕೊಂಡೇ ಅಭಿವೃದ್ಧಿ ಸಾಧ್ಯ” ಎಂಬುದನ್ನು ತನ್ನದೇ ರೀತಿಯಲ್ಲಿ ತೋರಿಸುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share