Monday, September 7, 2026
Join WhatsApp Group
HomeAgricultureಅಡಿಕೆ ವಿಸ್ತರಣೆಯ ವೇಗ ನೋಡಿ ಬೆಚ್ಚದಿರಿ!

ಅಡಿಕೆ ವಿಸ್ತರಣೆಯ ವೇಗ ನೋಡಿ ಬೆಚ್ಚದಿರಿ!

ಅಡಿಕೆ ಬೆಳೆ ವಿಸ್ತರಣೆ: ಇದು ಸಮೃದ್ಧಿಯ ಸೂಚನೆಯೋ, ಎಚ್ಚರಿಕೆಯ ಗಂಟೆಯೋ?

ಬಾಲಕೃಷ್ಣ ಹೆಗಡೆ, ಶಿರಸಿ

ಅಡಿಕೆ–ವೀಳ್ಯದೆಲೆ ಮೂಲತಃ ಭಾರತದ್ದಲ್ಲ. ಸಸ್ಯಶಾಸ್ತ್ರೀಯ ಸಂಶೋಧನೆಗಳು ಅಡಿಕೆಯ ಮೂಲವನ್ನು ಫಿಲಿಪೈನ್ಸ್ ಅಥವಾ ಆಗ್ನೇಯ ಏಷ್ಯಾದ ಕಡೆಗೆ ಬೊಟ್ಟು ಮಾಡುತ್ತವೆ. ಭಾರತೀಯ ಸಾಹಿತ್ಯದಲ್ಲಿ ಅಡಿಕೆ–ವೀಳ್ಯದೆಲೆ ಅಥವಾ ತಾಂಬೂಲದ ಮೊದಲ ಉಲ್ಲೇಖಗಳು ಮೌರ್ಯರ ಕಾಲದಲ್ಲಿ ಸಿಗುತ್ತವೆ.

ವೇದಗಳಲ್ಲಿ, ಮೂಲ ವಾಲ್ಮೀಕಿ ರಚಿತ ರಾಮಾಯಣದಲ್ಲಿ, ವ್ಯಾಸರಚಿತ ಮಹಾಭಾರತದಲ್ಲಿ, ಮನು ಮತ್ತು ಯಾಜ್ಞವಲ್ಕ್ಯ ಸ್ಮೃತಿಗಳಲ್ಲೂ ಅಡಿಕೆ, ವೀಳ್ಯದೆಲೆ ಅಥವಾ ತಾಂಬೂಲದ ಉಲ್ಲೇಖ ಕಂಡುಬರುವುದಿಲ್ಲ. ಮುಂದೆ ಕವಿಗಳು ರಾಮಾಯಣ ಮತ್ತು ಮಹಾಭಾರತವನ್ನು ಪುನರ್ರಚಿಸುತ್ತಾ ಹೋದಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಈ ಕೃತಿಗಳಲ್ಲಿ ತಾಂಬೂಲದ ಉಲ್ಲೇಖವೂ ಸೇರಿಕೊಂಡಿದೆ.

ಗುಪ್ತರ ಕಾಲದ ಮಂಡಸೌರ್ ಶಾಸನದಲ್ಲಿ, ವಾಗ್ಭಟನ ಅಷ್ಟಾಂಗ ಹೃದಯದಲ್ಲಿ ಅಡಿಕೆಯ ಉಲ್ಲೇಖವಿದೆ. ಗುಪ್ತರ ಕಾಲಕ್ಕಿಂತ ಸುಮಾರು 200ರಿಂದ 700 ವರ್ಷಗಳ ಹಿಂದೆಯೇ ರಚನೆಯಾದ ಚರಕ ಮತ್ತು ಸುಶ್ರುತ ಸಂಹಿತೆಗಳಲ್ಲೂ ಅಡಿಕೆಯ ಪ್ರಸ್ತಾಪ ಸಿಗುತ್ತದೆ. ಅದಕ್ಕಿಂತ ಸುಮಾರು 500 ವರ್ಷ ಹಿಂದೆ ಚಾಣಕ್ಯನ ಅರ್ಥಶಾಸ್ತ್ರದಲ್ಲಿಯೂ ಅಡಿಕೆಯನ್ನು ಒಳಗೊಂಡಂತೆ ಅರಣ್ಯ ಉತ್ಪನ್ನಗಳ ವ್ಯಾಪಾರ, ಕಂದಾಯ ಮತ್ತಿತರ ವಿಚಾರಗಳ ವಿವರಣೆ ಇದೆ.

ಭಾಷಾಶಾಸ್ತ್ರೀಯವಾಗಿ ನೋಡಿದರೆ ಅದು ‘ಅಡಕೆ’. ಜನರ ಬಳಕೆಯಲ್ಲಿ ಅದು ‘ಅಡಿಕೆ’ಯಾಗಿದೆ. ಇಂದಿಗೂ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಪ್ರದೇಶಗಳಲ್ಲಿ ‘ಅಡಕೆ’ ಅಥವಾ ‘ಅಡ್ಕೆ’ ಎಂಬ ಪದ ಬಳಕೆಯಲ್ಲಿದೆ. ಅಂತಿಮವಾಗಿ ಜನರ ಬಳಕೆಯಲ್ಲಿ ಯಾವ ಪದವಿದೆಯೋ ಅದೇ ರೂಢಿ. ಹೀಗಾಗಿ ನಾವೂ ‘ಅಡಿಕೆ’ ಎಂಬ ಪದದೊಂದಿಗೇ ಮುಂದುವರಿಯೋಣ!

ದಕ್ಷಿಣ ಕರ್ನಾಟಕದ ತೆಂಗಿನ ತೋಟಗಳ ನಡುವೆ ಅಡಿಕೆ ಸದ್ದಿಲ್ಲದೆ ಮಿಶ್ರ ಬೆಳೆಯಾಗಿ ವಿಸ್ತರಿಸುತ್ತಿದೆ. ಪಹಣಿಯಲ್ಲಿ ದಾಖಲಾಗದ ಚಿಕ್ಕ ಸಸಿಗಳು ಮತ್ತು ಇನ್ನೂ ಇಳುವರಿ ಹಂತಕ್ಕೆ ಬಂದಿಲ್ಲದ ತೋಟಗಳು ಈ ಲೆಕ್ಕಕ್ಕೆ ಸಿಗುವುದಿಲ್ಲ. ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲೂ ಕಾಲುವೆ, ನಾಲೆ ಹಾಗೂ ಬೋರ್‌ವೆಲ್ ನೀರಿನ ಸೌಲಭ್ಯ ಹೆಚ್ಚಾದಂತೆ ಅಡಿಕೆ ಬೆಳೆಯಲು ಧೈರ್ಯ ಮಾಡಿದ ರೈತರು ಸಾಕಷ್ಟು ಮಂದಿ ಇದ್ದಾರೆ. ಇಂತಹ ತೋಟಗಳ ದೊಡ್ಡ ಭಾಗವೂ ಅಧಿಕೃತ ಲೆಕ್ಕಕ್ಕೆ ಸಿಗುವುದಿಲ್ಲ. ಅರಣ್ಯ, ಬೆಟ್ಟ ಹಾಗೂ ಸರ್ಕಾರಿ ಜಮೀನುಗಳನ್ನು ಅತಿಕ್ರಮಿಸಿ ಅಡಿಕೆ ತೋಟ ಮಾಡಿರುವ ಪ್ರದೇಶಗಳೂ ಲೆಕ್ಕಕ್ಕೆ ಬರುವುದಿಲ್ಲ. ಕಾಫಿ ತೋಟಗಳೊಳಗೆ ಬೆಳೆದಿರುವ ಬಹುತೇಕ ಅಡಿಕೆ ಮರಗಳೂ ಇದೇ ಸ್ಥಿತಿ.

ಈ ಲೆಕ್ಕಕ್ಕೆ ಸಿಗದ ಪ್ರದೇಶಗಳನ್ನು ಬದಿಗಿಟ್ಟರೂ, ಜಿಲ್ಲಾವಾರು ಚಿತ್ರ ಕುತೂಹಲ ಮೂಡಿಸುತ್ತದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಡಿನ ಪ್ರಮಾಣ ಹೆಚ್ಚು. ಹೀಗಾಗಿ ಉಳಿದ ಕೃಷಿ ಜಮೀನಿನ ಬಹುಭಾಗ ಅಡಿಕೆ ಆವರಿಸಿದ್ದರೂ, ಒಟ್ಟಾರೆ ಕೃಷಿ ಜಮೀನಿನ ಪ್ರಮಾಣ ಕಡಿಮೆ. ದಕ್ಷಿಣ ಕನ್ನಡ ತನ್ನ ದೊಡ್ಡ ಕೃಷಿ ಕ್ಷೇತ್ರದ ಕಾರಣದಿಂದ ಸಹಜವಾಗಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ಅರ್ಧ ಬಯಲುಸೀಮೆಯನ್ನು ಹೊಂದಿರುವ ಶಿವಮೊಗ್ಗ ಮೊದಲ ಸ್ಥಾನದಲ್ಲಿರುವುದು ಗಮನಾರ್ಹ.

ಚಿಕ್ಕಮಗಳೂರು ನಾಲ್ಕನೇ ಸ್ಥಾನದಲ್ಲಿದೆ. ಬಯಲುನಾಡಿನ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಕ್ರಮವಾಗಿ ಮೂರನೇ, ಐದನೇ ಮತ್ತು ಆರನೇ ಸ್ಥಾನಗಳಲ್ಲಿವೆ. ಅರ್ಧ ಬಯಲುಸೀಮೆಯಾಗಿರುವ ಶಿವಮೊಗ್ಗ ಮೊದಲ ಸ್ಥಾನದಲ್ಲಿರುವುದು ಹಾಗೂ ನಂತರದ ಪಟ್ಟಿಯಲ್ಲಿ ಬಯಲುಸೀಮೆಯ ಹಲವು ಜಿಲ್ಲೆಗಳಿರುವುದನ್ನು ಗಮನಿಸಿದರೆ, ಅಡಿಕೆ ಈಗ ಕೇವಲ ಮಲೆನಾಡಿನ ಬೆಳೆ ಎಂಬ ಮಿತಿಯನ್ನು ದಾಟಿದೆ ಎನ್ನಬಹುದು. ಅಧಿಕೃತ ಅಂಕಿ-ಅಂಶಗಳ ಆಧಾರದಲ್ಲಿ ಅಡಿಕೆ ಬೆಳೆ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಬಯಲುಸೀಮೆಯಲ್ಲಿದೆ ಎಂದು ಹೇಳಬಹುದು.

ಒಟ್ಟಾರೆಯಾಗಿ 2025ರಲ್ಲಿ ಕರ್ನಾಟಕದಲ್ಲಿ ಅಡಿಕೆ ಸುಮಾರು 20 ಲಕ್ಷ ಎಕರೆ ಪ್ರದೇಶದಲ್ಲಿರಬಹುದು ಎಂಬ ಅಂದಾಜಿದೆ. ಒಂದು ಎಕರೆಗೆ ಸರಾಸರಿ ಒಂದು ಟನ್ ಒಣ ಅಡಿಕೆ ಸಿಗುತ್ತದೆ ಎಂದು ಲೆಕ್ಕ ಹಾಕಿದರೆ, ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 15ರಿಂದ 16 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ದೇಶೀಯ ಉತ್ಪಾದನೆಯಲ್ಲಿ ಕರ್ನಾಟಕ ಸುಮಾರು ಶೇ. 62 ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಕೇರಳ ಮತ್ತು ಅಸ್ಸಾಂ ಸೇರಿಕೊಂಡರೆ ದೇಶದ ಒಟ್ಟು ಅಡಿಕೆ ಉತ್ಪಾದನೆಯ ಸುಮಾರು ಶೇ. 88ನ್ನು ಈ ಮೂರು ರಾಜ್ಯಗಳೇ ಪೂರೈಸುತ್ತವೆ. ಮೇಘಾಲಯ ಮತ್ತು ಪಶ್ಚಿಮ ಬಂಗಾಳದಲ್ಲೂ ಅಲ್ಪ ಪ್ರಮಾಣದ ಅಡಿಕೆ ಬೆಳೆಯುತ್ತದೆ.

ಪಶ್ಚಿಮ ಬಂಗಾಳದ ಮೋಹಿತ್ ನಗರದಲ್ಲಿ 1958ರಿಂದಲೇ ಸಿಪಿಸಿಆರ್‌ಐ ಸಂಶೋಧನಾ ಕೇಂದ್ರವಿದೆ. ಅತ್ಯಧಿಕ ಇಳುವರಿ ನೀಡುವ ‘ಚಾಂಪಿಯನ್ ಮೋಹಿತ್ ನಗರ’ ತಳಿ ಇಲ್ಲಿನ ಸ್ಥಳೀಯ ತಳಿಯೆಂಬುದು ಗಮನಾರ್ಹ. ಅಸ್ಸಾಂನ ಕಹಿಕುಚಿಯಲ್ಲೂ ಅಡಿಕೆ ಸಂಶೋಧನಾ ಕೇಂದ್ರವಿದೆ.

ತಮಿಳುನಾಡಿನಲ್ಲಿ ಮೊದಲಿನಿಂದಲೂ ಅಲ್ಪ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. ಆದರೆ ಕೊರೊನಾ ನಂತರ ತಮಿಳುನಾಡು ಹಾಗೂ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಅಡಿಕೆ ಬೆಳೆಯುವ ಆಸಕ್ತಿ ತೀವ್ರವಾಗಿ ಹೆಚ್ಚಾಗಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ಅಡಿಕೆ ತೋಟಗಳು ನಿರ್ಮಾಣವಾಗುತ್ತಿವೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಈಗ ಇರುವ ಅಡಿಕೆ ಪ್ರದೇಶದ ಕನಿಷ್ಠ ಮುಕ್ಕಾಲು ಭಾಗದಷ್ಟು ಪ್ರದೇಶವನ್ನು ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೊಸದಾಗಿ ಒಂದೇ ಅವಧಿಯಲ್ಲಿ ನಾಟಿ ಮಾಡಲಾಗಿದೆ!

ಜಾಗತಿಕ ಅಡಿಕೆ ಉತ್ಪಾದನೆಯಲ್ಲಿ ಭಾರತ ಶೇ. 54ರಿಂದ 65ರಷ್ಟು ಪಾಲು ಹೊಂದಿದೆ ಎಂಬ ಅಂಕಿ-ಅಂಶಗಳಿವೆ. ಬಾಂಗ್ಲಾದೇಶ ತನ್ನ ದೇಶೀಯ ಅಗತ್ಯಕ್ಕೆ ಬೇಕಾದಷ್ಟು ಅಡಿಕೆ ಬೆಳೆಯುವುದರ ಜೊತೆಗೆ ರಫ್ತೂ ಮಾಡುತ್ತಿದೆ. ತೈವಾನ್, ಭೂತಾನ್, ಮಲೇಶಿಯಾ ಮತ್ತು ನೇಪಾಳ ತಮ್ಮ ಅಗತ್ಯಕ್ಕೆ ಬೇಕಾದಷ್ಟು ಅಡಿಕೆಯನ್ನು ತಾವೇ ಬೆಳೆಯುತ್ತಿವೆ. ಮಯನ್ಮಾರ್, ಶ್ರೀಲಂಕಾ, ಇಂಡೋನೇಷಿಯಾ ಮತ್ತು ಥೈಲ್ಯಾಂಡ್‌ಗಳು ಅಡಿಕೆಯನ್ನು ಸಣ್ಣ ಪ್ರಮಾಣದಲ್ಲಿ ಬಳಸಿ, ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿವೆ. ಚೀನಾ ಕೂಡ ಹೈನಾನ್ ಮತ್ತು ಯುನಾನ್ ಪ್ರಾಂತ್ಯಗಳಲ್ಲಿ ರಫ್ತು ಉದ್ದೇಶದಿಂದ ಅಡಿಕೆ ಬೆಳೆಯಲು ಪ್ರೋತ್ಸಾಹಿಸುತ್ತಿದೆ.

ಹೀಗಾಗಿ ಕರ್ನಾಟಕ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಅಡಿಕೆ ಬೆಳೆಯುವ ಆಸಕ್ತಿ ಅತಿರೇಕದ ಮಟ್ಟಕ್ಕೆ ಏರುತ್ತಿದೆ. ಆದರೆ ಇದರ ನಿಖರ ಪ್ರಮಾಣದ ಮಾಹಿತಿ ಯಾರ ಬಳಿಯೂ ಇಲ್ಲ. ಈ ಲೇಖನ ಬರೆಯುವ ಮತ್ತು ಮುಗಿಸುವ ನಡುವೆಯೇ ಎಷ್ಟೋ ಎಕರೆ ಹೊಸ ಅಡಿಕೆ ನಾಟಿಯಾಗಿರಬಹುದು!

ಶ್ರಮಜೀವಿ ಫಾರ್ಮ್ ಟಿವಿಯ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ ಅವರು ಅಡಿಕೆಯ ನರ್ಸರಿ, ರೋಗ, ಕೀಟ, ಉಪಬೆಳೆ ಹಾಗೂ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಎರಡೂ ಪ್ರದೇಶಗಳ ದೊಡ್ಡ ಸಂಖ್ಯೆಯ ರೈತರು ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಅನುಭವದ ಪ್ರಕಾರ ಕಳೆದ ಎರಡು ವರ್ಷಗಳಿಂದ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳ ಈ ನಾಲ್ಕು ರಾಜ್ಯಗಳಲ್ಲಿ ವರ್ಷಕ್ಕೆ ಕನಿಷ್ಠ 20 ಕೋಟಿ ಅಡಿಕೆ ಸಸಿಗಳು ಹೊಸದಾಗಿ ನಾಟಿಯಾಗುತ್ತಿವೆ!

ಕರ್ನಾಟಕ ಒಂದರಲ್ಲೇ ವರ್ಷಕ್ಕೆ ಕನಿಷ್ಠ ಎರಡು ಲಕ್ಷ ಎಕರೆ ಪ್ರದೇಶ ವಿಸ್ತರಣೆಯಾಗುತ್ತಿದ್ದು, ಸುಮಾರು 10 ಕೋಟಿ ಸಸಿಗಳು ನಾಟಿಯಾಗುತ್ತಿವೆ ಎಂಬುದು ಅವರ ಅನುಭವದ ಅಂದಾಜು. ಅಡಿಕೆಗೆ ಹೆಚ್ಚು ಒತ್ತು ನೀಡದ ಅವರ ಫಾರ್ಮ್ ಟಿವಿ–ಒಟಿಟಿ ಟಿವಿ ಆ್ಯಪ್‌ನ ನೇರ ಪ್ರಸಾರದಲ್ಲೂ ಶೇ. 80ಕ್ಕಿಂತ ಹೆಚ್ಚು ಪ್ರಶ್ನೆಗಳು ಅಡಿಕೆಯ ಬಗ್ಗೆಯೇ ರೈತರಿಂದ ಬರುತ್ತಿವೆ.

ಇಲ್ಲಿ ನೀಡಿರುವ ಜಿಲ್ಲಾವಾರು ಪಟ್ಟಿಯು 2025ರಲ್ಲಿ ತೋಟಗಾರಿಕಾ ಜಂಟಿ ನಿರ್ದೇಶಕರು, ಲಾಲ್‌ಬಾಗ್, ಬೆಂಗಳೂರು ಅವರು ಶ್ರಮಜೀವಿ ಕೃಷಿ ಮಾಸಪತ್ರಿಕೆಗೆ ನೀಡಿದ ಅಧಿಕೃತ ಮಾಹಿತಿಯನ್ನು ಆಧರಿಸಿದೆ. ಹೀಗಾಗಿ ಇದು ಅಡಿಕೆಯ ಬೃಹತ್ ವಿಸ್ತರಣೆಯ ಒಂದು ಅಂದಾಜು ಚಿತ್ರಣವನ್ನು ನೀಡುತ್ತದೆಯೇ ಹೊರತು, ನೂರಕ್ಕೆ ನೂರು ನಿಖರವಾದ ಮಾಹಿತಿ ಎಂದು ಹೇಳಲಾಗದು.

ಕೇಂದ್ರ ಕೃಷಿ ಇಲಾಖೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಅಡಿಕೆ ಉತ್ಪಾದನೆ ಮತ್ತು ಬೆಳೆ ಕ್ಷೇತ್ರದ ಒಟ್ಟು ಅಂಕಿ-ಅಂಶಗಳೂ 2025ರಲ್ಲಿ ಕರ್ನಾಟಕ ತೋಟಗಾರಿಕಾ ಇಲಾಖೆ ನೀಡಿದ ಮಾಹಿತಿಗಿಂತ ಕಡಿಮೆ ಇವೆ. ಇನ್ನುಳಿದ ಮಾಹಿತಿಗಳನ್ನು ವಿಕಿಪೀಡಿಯಾ ಮತ್ತು ವಿವಿಧ ಅಂತಾರಾಷ್ಟ್ರೀಯ ಜರ್ನಲ್‌ಗಳಿಂದ ಪಡೆಯಲಾಗಿದೆ. ಅಡಿಕೆ ವಿಸ್ತರಣೆಯ ವೇಗವನ್ನು ಗಮನಿಸಿದರೆ, ಈ ಅಂಕಿ-ಅಂಶಗಳ ನಿಖರತೆಯೂ ‘ಕುರುಡರು ಆನೆಯನ್ನು ವರ್ಣಿಸಿದಷ್ಟು’ ಎನ್ನುವುದರಲ್ಲಿ ಯಾವುದೇ ಸಂಕೋಚವಿಲ್ಲ.

ಆದರೆ ಈ ವಿಸ್ತರಣೆಯ ನಡುವೆ ಒಂದು ಮುಖ್ಯ ಪ್ರಶ್ನೆ ಎದುರಾಗುತ್ತದೆ. ಅಡಿಕೆಯ ವಿಸ್ತರಣೆ ಇದೇ ವೇಗದಲ್ಲಿ ಮುಂದುವರಿದರೆ ಮುಂದೇನು?

ಸಾಂಪ್ರದಾಯಿಕ ಅಡಿಕೆ ರೈತರು ಅಡಿಕೆಯನ್ನು ತಾಂಬೂಲ, ಪುಣ್ಯವಸ್ತು ಎಂಬ ಭಾವನಾತ್ಮಕ ವಾದದ ಮಟ್ಟದಲ್ಲೇ ನೋಡದೆ ವಾಸ್ತವಕ್ಕೆ ಬರಬೇಕಿದೆ. ಅಡಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಕಾನೂನುಬದ್ಧವಾಗಿ ನಿರ್ಬಂಧಿತ ಬೆಳೆಯನ್ನಾಗಿಸುವ ನಿಟ್ಟಿನಲ್ಲಿ ಅವರು ಹೋರಾಡದಿದ್ದರೆ ನಷ್ಟವಾಗುವುದು ಅವರಿಗೇ. ಅಸಾಂಪ್ರದಾಯಿಕವಾಗಿ ಹೊಸದಾಗಿ ಅಡಿಕೆ ಬೆಳೆಯಲು ಮುಂದಾಗುತ್ತಿರುವವರು ಈ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇರಬಹುದು.

ಅಡಿಕೆ ಅತಿಉತ್ಪಾದನೆಯಾಗಿ ದರ ಕುಸಿದರೂ, ಜೋಳ, ಕಬ್ಬು ಅಥವಾ ಇತರ ಆಹಾರಧಾನ್ಯಗಳಿಗಿಂತ ಅದು ಹೆಚ್ಚು ಆದಾಯ ತರುವ ಸಾಧ್ಯತೆ ಇದೆ. ಆದರೆ ಉತ್ಪಾದನಾ ವೆಚ್ಚ ಈಗಾಗಲೇ ಹೆಚ್ಚಿರುವ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳ ರೈತರಿಗೆ ಅತಿಉತ್ಪಾದನೆಯ ಹೊಡೆತ ನೇರವಾಗಿ ಬೀಳುತ್ತದೆ.

ಹೀಗಾಗಿ ಪ್ರಶ್ನೆ ಕೇವಲ “ಎಷ್ಟು ಅಡಿಕೆ ಬೆಳೆಯುತ್ತಿದೆ?” ಎಂಬುದಲ್ಲ. “ಇನ್ನೆಷ್ಟು ಬೆಳೆಯಲಿದೆ, ಅದರ ಪರಿಣಾಮ ಏನಾಗಲಿದೆ ಮತ್ತು ಈ ವಿಸ್ತರಣೆಯನ್ನು ವೈಜ್ಞಾನಿಕವಾಗಿ ಹೇಗೆ ಅರ್ಥಮಾಡಿಕೊಳ್ಳಬೇಕು?” ಎಂಬುದೂ ಈಗಲೇ ಚರ್ಚೆಯಾಗಬೇಕಾದ ವಿಷಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share