ಮುರ್ಡೇಶ್ವರ: ಬೈಲೂರು ರಸ್ತೆಯ ಗೂಡಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ವೇಳೆ ಮುರ್ಡೇಶ್ವರ ಪೊಲೀಸರು ದಾಳಿ ನಡೆಸಿದ್ದು, ಒಬ್ಬ ಆರೋಪಿಯನ್ನು ಸ್ಥಳದಲ್ಲೇ ಹಿಡಿದಿದ್ದಾರೆ. ಉಳಿದ ಆರೋಪಿತರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.
ಸೆಪ್ಟೆಂಬರ್ 13ರಂದು ರಾತ್ರಿ 11.15ರ ಸುಮಾರಿಗೆ ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ (ಕಾ&ಸು) ಹಣಮಂತ ಬಿರಾದಾರ ಅವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ಆರೋಪಿತರು ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ದಾಳಿಯ ವೇಳೆ ಸಣಬಲ್ಸೆ, ಬೈಲೂರು ನಿವಾಸಿ ಪ್ರವೀಣ ಅಣ್ಣಪ್ಪ ದೇವಾಡಿಗ (27) ಎಂಬಾತ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಮತ್ತೊಬ್ಬ ಆರೋಪಿತನಾದ ಬೈಲೂರಿನ ಮಾರ್ಕಂಡೇಶ್ವರ ನಿವಾಸಿ ಪ್ರವೀಣ ರವಿ ನಾಯ್ಕ ಸೇರಿದಂತೆ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಿಂದ 3,260 ರೂ ನಗದು, ಇಸ್ಪೀಟ್ ಎಲೆಗಳು ಹಾಗೂ ಇಸ್ಪೀಟ್ ಎಲೆಗಳನ್ನು ಹಾಕಲು ಬಳಸಿದ್ದ ಬಟ್ಟೆ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.