Saturday, September 19, 2026
Join WhatsApp Group
HomeLocal Newsಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧ ಸಿಎಂ ಭೇಟಿ: ಜನಪ್ರತಿನಿಧಿಗಳಿಗೆ ಸ್ವರ್ಣವಲ್ಲೀ ಶ್ರೀಗಳ ಆಗ್ರಹ

ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧ ಸಿಎಂ ಭೇಟಿ: ಜನಪ್ರತಿನಿಧಿಗಳಿಗೆ ಸ್ವರ್ಣವಲ್ಲೀ ಶ್ರೀಗಳ ಆಗ್ರಹ

ಶಿರಸಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಬೇಕು ಎಂದು ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಸೋಂದಾದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಸ್ವರ್ಣವಲ್ಲೀ ಶ್ರೀಗಳನ್ನು ಭೇಟಿಯಾಗಿ ದರ್ಶನ ಹಾಗೂ ಆಶೀರ್ವಾದ ಪಡೆದ ಸಂದರ್ಭದಲ್ಲಿ ಬೇಡ್ತಿ-ಅಘನಾಶಿನಿ ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಆರ್.ವಿ. ದೇಶಪಾಂಡೆ ಅವರು ಬೇಡ್ತಿ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಬಿಡಬೇಕು ಎಂದು ತಾವು ಬರೆದಿರುವ ಪತ್ರಗಳ ಪ್ರತಿಗಳನ್ನು ಶ್ರೀಗಳಿಗೆ ನೀಡಿದರು. ಬೇಡ್ತಿ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಇದು ವಿಫಲ ಯೋಜನೆಯಾಗಲಿದೆ ಎಂಬುದು ತಮ್ಮ ನಿಲುವು ಎಂದು ಅವರು ತಿಳಿಸಿದರು. 2022ರಲ್ಲಿಯೂ ತಾವು ಈ ಯೋಜನೆಯನ್ನು ನಿರರ್ಥಕ ಎಂದು ಹೇಳಿದ್ದನ್ನು ದೇಶಪಾಂಡೆ ಅವರು ನೆನಪಿಸಿಕೊಂಡರು.

ಈ ವೇಳೆ 1992ರಲ್ಲಿಯೇ ಬೇಡ್ತಿ ಯೋಜನೆಗೆ ಸಂಬಂಧಿಸಿದಂತೆ ನಿಯೋಗವೊಂದು ದೆಹಲಿಗೆ ತೆರಳಿದ್ದ ವಿಚಾರವನ್ನು ಸ್ವರ್ಣವಲ್ಲೀ ಶ್ರೀಗಳು ದೇಶಪಾಂಡೆ ಅವರ ಗಮನಕ್ಕೆ ತಂದರು. ಇದೀಗ ಮತ್ತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಯೋಜನೆಗಳ ವಿರುದ್ಧ ಜಿಲ್ಲೆಯ ನಿಲುವನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಈ ಸಂಬಂಧ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ವತಿಯಿಂದ ನೀಡಲಾದ ಮನವಿಯನ್ನು ಶ್ರೀಗಳು ದೇಶಪಾಂಡೆ ಅವರಿಗೆ ಹಸ್ತಾಂತರಿಸಿದರು. ಶಿರಸಿ ಮತ್ತು ಯಲ್ಲಾಪುರ ಶಾಸಕರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗುವುದಾಗಿ ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ ಎಂದು ಸಮಿತಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೇಡ್ತಿ-ಅಘನಾಶಿನಿ ಯೋಜನೆ ವಿರೋಧಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.

ಭಟ್ಕಳದ ರಾಮಾ ಮೊಗೇರ, ರಮೇಶ ದುಬಾಟಿ, ದೀಪಕ್ ದೊಡ್ಡರ, ವೆಂಕಟೇಶ ಹೊಸಬಾಳೆ, ನಿತಿನ್ ಕಾಸರಕೋಡ, ಶ್ರೀಮಠದ ಕಾರ್ಯಾಧ್ಯಕ್ಷ ವಿ.ಎನ್. ಹೆಗಡೆ, ಕಾರ್ಯದರ್ಶಿ ಜಿ.ವಿ. ಹೆಗಡೆ, ಆರ್.ಎನ್. ಹೆಗಡೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share