ಸೂರ್ಯನ ಬೆಳಕು ಇಲ್ಲದಿದ್ದರೆ ಭೂಮಿಯಲ್ಲಿ ಜೀವಿಗಳು ಉಳಿಯಲು ಸಾಧ್ಯವಿಲ್ಲ. ಆದರೆ ಅದೇ ಸೂರ್ಯನಿಂದ ಬರುವ ಕೆಲವು ಕಿರಣಗಳು ಮಿತಿಮೀರಿದರೆ ನಮ್ಮ ಚರ್ಮದಿಂದ ಹಿಡಿದು ಕಣ್ಣಿನವರೆಗೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಪಾಯಕಾರಿ ಅತಿನೇರಳೆ (UV) ಕಿರಣಗಳ ಬಹುಪಾಲನ್ನು ತಡೆದು ಭೂಮಿಯ ಜೀವಜಗತ್ತಿಗೆ ರಕ್ಷಣಾ ಕವಚದಂತೆ ನಿಂತಿರುವುದು ಓಜೋನ್ ಪದರ. ಹೀಗಿರುವಾಗ ಆ ಕವಚದಲ್ಲಿ ಮತ್ತೆ ದೊಡ್ಡದೊಂದು ರಂಧ್ರ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಹಜವಾಗಿಯೇ ಆತಂಕ ಮೂಡಿಸುತ್ತಿದೆ.
ಅಂಟಾರ್ಕ್ಟಿಕಾ ಮೇಲಿನ ಓಜೋನ್ ರಂಧ್ರ ಸೆಪ್ಟೆಂಬರ್ನ ಮೊದಲ ಎರಡು ವಾರಗಳಲ್ಲಿ ಅಸಾಮಾನ್ಯ ವೇಗದಲ್ಲಿ ವಿಸ್ತರಿಸಿದ್ದು, ಸೆಪ್ಟೆಂಬರ್ 12ರ ವೇಳೆಗೆ ಅದರ ವಿಸ್ತೀರ್ಣ ಸುಮಾರು 2.5 ಕೋಟಿ ಚದರ ಕಿಲೋಮೀಟರ್ ತಲುಪಿದೆ ಎಂದು ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಅಟ್ಮಾಸ್ಫಿಯರ್ ಮಾನಿಟರಿಂಗ್ ಸರ್ವಿಸ್ (CAMS) ಮಾಹಿತಿ ನೀಡಿದೆ. ಆಗಸ್ಟ್ ಅಂತ್ಯದಲ್ಲಿ ಇದರ ವಿಸ್ತೀರ್ಣ ಸುಮಾರು 1.5 ಕೋಟಿ ಚದರ ಕಿಲೋಮೀಟರ್ನಷ್ಟಿತ್ತು. ಅಂದರೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಸುಮಾರು ಒಂದು ಕೋಟಿ ಚದರ ಕಿಲೋಮೀಟರ್ನಷ್ಟು ವಿಸ್ತರಣೆ ಕಂಡುಬಂದಿದೆ.
ಅಂಟಾರ್ಕ್ಟಿಕಾದ ದಕ್ಷಿಣಕ್ಕೆ 60 ಡಿಗ್ರಿ ಅಕ್ಷಾಂಶದೊಳಗೆ ಓಜೋನ್ ಸಾಂದ್ರತೆ 220 ಡಾಬ್ಸನ್ ಯೂನಿಟ್ಗಳಿಗಿಂತ ಕಡಿಮೆಯಿರುವ ಪ್ರದೇಶವನ್ನು ಸಾಮಾನ್ಯವಾಗಿ ‘ಓಜೋನ್ ರಂಧ್ರ’ ಎಂದು ಗುರುತಿಸಲಾಗುತ್ತದೆ. ಈ ಬಾರಿ ರಂಧ್ರದ ಗಾತ್ರ, ಇದೇ ಅವಧಿಯ ಸಾಮಾನ್ಯ ಸರಾಸರಿಗೆ ಹೋಲಿಸಿದರೆ ಸುಮಾರು 50 ಲಕ್ಷ ಚದರ ಕಿಲೋಮೀಟರ್ಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೂ ವಿಸ್ತರಣೆಯ ವೇಗದಲ್ಲಿ ಬದಲಾವಣೆ ಕಂಡುಬಂದಿರುವುದು ವಿಜ್ಞಾನಿಗಳ ಗಮನ ಸೆಳೆದಿದೆ.
ಆದರೆ ಇಲ್ಲಿ ಒಂದು ಮುಖ್ಯ ವಿಚಾರವಿದೆ. ‘ಓಜೋನ್ ರಂಧ್ರ 2.5 ಕೋಟಿ ಚದರ ಕಿಲೋಮೀಟರ್ ಆಗಿದೆ’ ಎಂದಾಕ್ಷಣ ಭೂಮಿಯ ಮೇಲಿನ ಓಜೋನ್ ಪದರವೇ ಅಪಾಯದಲ್ಲಿದೆ ಎಂದು ಅರ್ಥವಲ್ಲ. ರಂಧ್ರದ ವಿಸ್ತೀರ್ಣ ಮಾತ್ರ ಓಜೋನ್ ಪದರದ ಆರೋಗ್ಯವನ್ನು ಅಳೆಯುವ ಏಕೈಕ ಮಾನದಂಡವಲ್ಲ. ಓಜೋನ್ನ ಕನಿಷ್ಠ ಸಾಂದ್ರತೆ ಎಷ್ಟಿದೆ, ಎಷ್ಟು ಪ್ರಮಾಣದಲ್ಲಿ ಓಜೋನ್ ನಷ್ಟವಾಗಿದೆ ಮತ್ತು ವಾತಾವರಣದಲ್ಲಿರುವ ಒಟ್ಟು ಓಜೋನ್ ದ್ರವ್ಯರಾಶಿ ಎಷ್ಟಿದೆ ಎಂಬ ಹಲವು ಅಂಶಗಳನ್ನು ಒಟ್ಟಾಗಿ ನೋಡಬೇಕಾಗುತ್ತದೆ.
ಹಾಗಾದರೆ ಅಂಟಾರ್ಕ್ಟಿಕಾದಲ್ಲಿ ಓಜೋನ್ ರಂಧ್ರ ಇದ್ದಕ್ಕಿದ್ದಂತೆ ಇಷ್ಟು ವೇಗವಾಗಿ ವಿಸ್ತರಿಸಲು ಕಾರಣವೇನು?
ಇದರಲ್ಲಿ ಅಲ್ಲಿನ ತೀವ್ರ ಚಳಿ ಪ್ರಮುಖ ಪಾತ್ರ ವಹಿಸುತ್ತದೆ. ದಕ್ಷಿಣ ಧ್ರುವದ ಮೇಲ್ಭಾಗದಲ್ಲಿ ಸುಮಾರು 20 ಕಿಲೋಮೀಟರ್ ಎತ್ತರದಲ್ಲಿರುವ ಸ್ಟ್ರಾಟೋಸ್ಪಿಯರ್ನಲ್ಲಿ ತಾಪಮಾನ ತೀವ್ರವಾಗಿ ಕುಸಿದಾಗ ‘ಪೋಲಾರ್ ಸ್ಟ್ರಾಟೋಸ್ಫಿಯರಿಕ್ ಕ್ಲೌಡ್ಸ್’ (PSC) ಎಂದು ಕರೆಯಲಾಗುವ ವಿಶೇಷ ಮೋಡಗಳು ರೂಪುಗೊಳ್ಳುತ್ತವೆ. ಈ ಮೋಡಗಳು ಸಾಮಾನ್ಯ ಮೋಡಗಳಂತಲ್ಲ. ವಾತಾವರಣದಲ್ಲಿರುವ ಕೆಲವು ರಾಸಾಯನಿಕಗಳನ್ನು ಓಜೋನ್ ಅನ್ನು ವೇಗವಾಗಿ ಒಡೆಯುವಂತಹ ರೂಪಕ್ಕೆ ಪರಿವರ್ತಿಸಲು ಇವು ನೆರವಾಗುತ್ತವೆ.
ಅಂಟಾರ್ಕ್ಟಿಕಾದ ಚಳಿಗಾಲ ಮುಗಿದು ಸೂರ್ಯನ ಬೆಳಕು ದಕ್ಷಿಣ ಧ್ರುವದತ್ತ ಮರಳುವ ವೇಳೆಯಲ್ಲಿ ಈ ರಾಸಾಯನಿಕ ಕ್ರಿಯೆಗಳು ಹೆಚ್ಚು ಚುರುಕಾಗುತ್ತವೆ. ಹೀಗಾಗಿ ಸಾಮಾನ್ಯವಾಗಿ ಆಗಸ್ಟ್ನಿಂದ ಅಕ್ಟೋಬರ್ ಅವಧಿಯಲ್ಲಿ ಓಜೋನ್ ರಂಧ್ರ ದೊಡ್ಡದಾಗುತ್ತದೆ. ನಂತರ ಅಂಟಾರ್ಕ್ಟಿಕಾದಲ್ಲಿ ತಾಪಮಾನ ಏರಿಕೆಯಾಗುತ್ತಾ, ವಾತಾವರಣದ ಚಲನವಲನ ಬದಲಾಗುತ್ತಾ ಹೋದಂತೆ ರಂಧ್ರವೂ ಕ್ರಮೇಣ ಕುಗ್ಗುತ್ತದೆ.
ಹೀಗಾಗಿ ಈಗಿನ ಬೆಳವಣಿಗೆಯನ್ನು ನೋಡಿ ‘ಓಜೋನ್ ಪದರ ನಾಶವಾಗುತ್ತಿದೆ’ ಎಂದು ತಕ್ಷಣ ತೀರ್ಮಾನಿಸುವುದಕ್ಕಿಂತ, ಮುಂದಿನ ವಾರಗಳಲ್ಲಿ ರಂಧ್ರದ ಗಾತ್ರ, ಓಜೋನ್ ಸಾಂದ್ರತೆ ಮತ್ತು ಒಟ್ಟು ಓಜೋನ್ ಪ್ರಮಾಣ ಹೇಗೆ ಬದಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ವಿಜ್ಞಾನಿಗಳೂ ಇದೇ ಕಾರಣಕ್ಕೆ ಅಂಟಾರ್ಕ್ಟಿಕಾದ ಮೇಲಿನ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಓಜೋನ್ ರಂಧ್ರದ ಬಗ್ಗೆ ಇಡೀ ಜಗತ್ತು ಆತಂಕಗೊಂಡಿತ್ತು. ಆದರೆ ವಿವಿಧ ಹಂತಗಳಲ್ಲಿ ಕೈಗೊಂಡ ಜಾಗತಿಕ ಕ್ರಮಗಳಿಂದ ಪರಿಸ್ಥಿತಿ ನಿಧಾನವಾಗಿ ಸುಧಾರಿಸುವ ಹಾದಿಯಲ್ಲಿದೆ. ಅದೇ ಸಮಯದಲ್ಲಿ, ಈ ರಕ್ಷಣಾ ಕವಚ ಇನ್ನೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ನಿರಾಳವಾಗಿ ಕುಳಿತುಕೊಳ್ಳುವಂತೆಯೂ ಇಲ್ಲ. ಆಕಾಶದ ಮೇಲಿರುವ ಈ ತೆಳುವಾದ ಓಜೋನ್ ಪದರ ನಮಗೆ ಕಾಣುವುದಿಲ್ಲ. ಆದರೆ ಅದರ ಮಹತ್ವ ಮಾತ್ರ ಪ್ರತಿದಿನ ನಮ್ಮ ಮೇಲೆಯೇ ಹರಡಿರುವ ಸೂರ್ಯನ ಬೆಳಕಿನೊಂದಿಗೆ ನಮಗೆ ನೆನಪಾಗುತ್ತಲೇ ಇರುತ್ತದೆ.