Friday, March 13, 2026
HomeStateಬಿಜೆಪಿ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ

ಬಿಜೆಪಿ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ

ಬೆಂಗಳೂರು: ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತು ಪ್ರಕಟಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷ ನಾಯಕರು ಆಡುತ್ತಿರುವ ಮಾತುಗಳು ವೀರಾವೇಶದಿಂದ ಕೂಡಿದ್ದು, ಅದು ಆತ್ಮವಂಚನೆ ಹಾಗೂ ಅಸಹ್ಯದ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ.

ಹಿಂದೆ ಅಧಿಕಾರದಲ್ಲಿದ್ದಾಗ ತಾವೇ ಉರ್ದು ಭಾಷೆಯಲ್ಲಿ ಜಾಹೀರಾತು ನೀಡಿದ್ದವರು, ಈಗ ಅದೇ ವಿಚಾರಕ್ಕೆ ನಮ್ಮ ವಿರುದ್ಧ ಮುಗಿಬೀಳುತ್ತಿರುವುದು ‘ಹಿಪೋಕ್ರಸಿ’ ಎಂದು ಸಿಎಂ ಟೀಕಿಸಿದರು. ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಜಾಹೀರಾತು ನೀಡಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಲು ಜಾಹೀರಾತು ನೀಡಲಾಗುತ್ತದೆ. ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯಲ್ಲಿ ಜಾಹೀರಾತು ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಎಂದು ಸಿಎಂ ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರು ಹಲವು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದರು. ಆಗ ಅವರಿಗೆ ಅದು ತುಷ್ಟೀಕರಣವಾಗಿ ಕಾಣಿಸಲಿಲ್ಲ. ಈಗ ನಮ್ಮ ಸರ್ಕಾರ ಅದೇ ರೀತಿ ಜಾಹೀರಾತು ನೀಡಿದಾಗ ಮಾತ್ರ ಕನ್ನಡಪ್ರೇಮ ಎದ್ದುನಿಂತಂತೆ ವರ್ತಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ನೆಲ-ಜಲ-ಭಾಷೆಯ ವಿಚಾರದಲ್ಲಿ ಬಿಜೆಪಿ ನಾಯಕರಿಂದ ಪಾಠ ಕಲಿಯಬೇಕಾದ ಪರಿಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಹೋರಾಟದ ಮೊದಲ ಸಾಲಿನಲ್ಲಿ ನಿಂತಿದ್ದೆ ಎಂದು ಅವರು ಹೇಳಿದರು.

ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನ ಆರಂಭಿಸಿದ್ದೇನೆ. ನನಗೆ ಕನ್ನಡ ಬರಿ ಭಾಷೆಯಲ್ಲ, ಅದು ಬದುಕು ಎಂದು ಸಿಎಂ ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share