ಶಿರಸಿ: ಹೆಣ್ಣಿನ ಮಾಂಗಲ್ಯ, ಅರಿಶಿಣ-ಕುಂಕುಮಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಯಾರೇ ಅರಿಶಿಣ ಕುಂಕುಮ ನೀಡಿದರೂ ಬೇಡ ಎನ್ನದೆ ಸ್ವೀಕರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ತಾಲೂಕಿನ ದೊಡ್ನಳ್ಳಿಯಲ್ಲಿ ಶುಕ್ರವಾರ ಅನಂತಮೂರ್ತಿ ಹೆಗಡೆ ಹಾಗೂ ತಂಡದ ವತಿಯಿಂದ ಶ್ರಾವಣ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ಆಯೋಜಿಸಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಿಶಿಣ ಕುಂಕುಮಕ್ಕೆ ತನ್ನದೇ ಆದ ಶಕ್ತಿ ಮತ್ತು ವೈಶಿಷ್ಟ್ಯವಿದೆ. ಯಾವ ಮನೆಯಲ್ಲಿ ಹೆಣ್ಣು ಮಗು ಸಂತಸದಿಂದ ಇರುತ್ತಾಳೋ ಆ ಮನೆ ಸಮೃದ್ಧವಾಗಿರುತ್ತದೆ. ಸಮಾಜದಲ್ಲಿ ಸಾಮರಸ್ಯ ಬೆಳೆಸುವುದು ಅಗತ್ಯ ಎಂದರು.
ನಾವೆಲ್ಲರೂ ಒಂದೇ, ನಾವೆಲ್ಲರೂ ಬಂಧುಗಳಂತೆ ಬದುಕಬೇಕು. ಮನೆಯಿಂದ ಹೊರಗೆ ಬಂದ ಬಳಿಕ ಜಾತಿ-ಭೇದ ಮರೆತು ಅನ್ಯೋನ್ಯತೆಯಿಂದ ಇರಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಬೇಸರ ಮೂಡಿಸುತ್ತವೆ. ಒಂದು ಕುಟುಂಬ ಸುಂದರವಾಗಿರಬೇಕಾದರೆ ಆ ಮನೆಯ ಮಹಿಳೆ ಸದೃಢವಾಗಿರಬೇಕು. ಹೆಣ್ಣನ್ನು ಪೂಜನೀಯ ಭಾವನೆಯಿಂದ ಕಾಣುವ ನಮ್ಮ ಸಂಸ್ಕೃತಿಯಲ್ಲಿ ಆಕೆಯನ್ನು ನೆಲ, ಜಲಕ್ಕೆ ಹೋಲಿಸಲಾಗಿದೆ. ಆದ್ದರಿಂದ ಮಹಿಳೆಯರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ಹೇಳಿದರು.
ದೊಡ್ನಳ್ಳಿ ಪಂಚಾಯಿತಿ ಪಿಡಿಓ ಪ್ರೀತಿ ಶೆಟ್ಟಿ ಮಾತನಾಡಿ, ಮಹಿಳೆಗೆ ಅರಿಶಿಣ ಕುಂಕುಮ ನೀಡುವುದು ಅತ್ಯಂತ ದೊಡ್ಡ ಗೌರವ ನೀಡಿದಂತಾಗಿದೆ. ಅರಿಶಿಣ-ಕುಂಕುಮಕ್ಕೆ ನಮ್ಮ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದ್ದು, ಹಸಿರು ಬಳೆಗಳನ್ನು ನೀಡುವ ಸಂಪ್ರದಾಯಕ್ಕೂ ತನ್ನದೇ ಆದ ಮಹತ್ವವಿದೆ ಎಂದರು.
ಬಿಜೆಪಿ ಮುಖಂಡ ಶ್ರೀಪಾದ ಹೆಗಡೆ ಮಾತನಾಡಿ, ಹಿಂದೂ ಧರ್ಮದಲ್ಲಿ ಅರಿಶಿಣ ಕುಂಕುಮಕ್ಕೆ ವಿಶೇಷ ಸ್ಥಾನಮಾನವಿದೆ. ನಮ್ಮ ದೇಶದಲ್ಲಿ ಬೆಳೆಯುವ ಅರಿಶಿಣಕ್ಕೆ ವಿದೇಶಗಳಲ್ಲೂ ಉತ್ತಮ ಬೇಡಿಕೆಯಿದೆ. ಅರಿಶಿಣದ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಹೊಂದಿದೆ ಎಂದರು.
ನರೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ಮಾತನಾಡಿ, ಶ್ರಾವಣ ಮಾಸ ಮಹಿಳೆಯರ ಪಾಲಿಗೆ ವಿಶೇಷವಾದ ತಿಂಗಳಾಗಿದ್ದು, ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಅನಂತಮೂರ್ತಿ ಹೆಗಡೆ ಅವರು ಈಗಾಗಲೇ ಹಲವು ಜನಪರ ಕೆಲಸಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲೂ ಇನ್ನಷ್ಟು ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಅರಿಶಿಣ ಕುಂಕುಮ ಹಾಗೂ ಭಾಗಿನ ನೀಡಿ ಸತ್ಕರಿಸಲಾಯಿತು. ಶಂಭುಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಭಟ್, ಸುಬ್ರಾಯ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ, ರಾಮಣ್ಣ ಜೋಗಿ, ವಿನಾಯಕ ಭಟ್, ಕೀರಣ ಕಾನಡೆ, ವಿರೇಂದ್ರ ಗೌಡ, ಶಿವಪ್ಪ ನಾಯ್ಕ ನರೇಬೈಲ್, ಸಂತೋಷ ನಾಯ್ಕ ಬ್ಯಾಗದ್ದೆ, ಸಚಿನ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಲಕ್ಷ್ಮೀ ಕಾನಡೆ ನಿರೂಪಿಸಿದರು.