ಯಲ್ಲಾಪುರ: ನಾವೆಲ್ಲರೂ ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನೇ ಬಳಸಬೇಕು. ಇದರಿಂದ ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ನಮ್ಮ ನೆಲದ ಉತ್ಪನ್ನಗಳು, ಉತ್ಪಾದಕರು ಹಾಗೂ ಗೃಹೋದ್ಯಮಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಸೆ.11ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಸ್ವದೇಶಿ ವಸ್ತುಗಳ ಮಾರಾಟ ಮೇಳ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗದ ಗಜಮುಖ ಇವೆಂಟ್ಸ್ ವತಿಯಿಂದ ಯಲ್ಲಾಪುರದಲ್ಲಿ ಸ್ವದೇಶಿ ಮೇಳ ಆಯೋಜಿಸಿರುವುದು ಶ್ಲಾಘನೀಯ. ಒಂದೇ ಸ್ಥಳದಲ್ಲಿ ವಿವಿಧ ಬಗೆಯ ಸ್ವದೇಶಿ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಅವಕಾಶ ಇದರಿಂದ ದೊರೆಯುತ್ತಿದೆ ಎಂದು ಅವರು ಹೇಳಿದರು.
ಸ್ಥಳೀಯ ಉತ್ಪನ್ನಗಳು ಹಾಗೂ ಗೃಹೋದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ಇಂತಹ ಮೇಳಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಹಿಂದೆ ಆಯೋಜಿಸಿದ್ದ ಹಲಸು ಮೇಳಕ್ಕೆ ದೊರೆತ ಉತ್ತಮ ಸ್ಪಂದನೆಯಂತೆಯೇ ಸ್ವದೇಶಿ ಮೇಳಕ್ಕೂ ಜನರು ಬೆಂಬಲ ನೀಡಬೇಕು ಎಂದು ಅವರು ಆಶಿಸಿದರು.
ಇತ್ತ, ಮೇಳದ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೇಳಕ್ಕೆ ಭೇಟಿ ನೀಡಿ ಉತ್ಪನ್ನಗಳ ವೀಕ್ಷಣೆ ಹಾಗೂ ಖರೀದಿಯಲ್ಲಿ ತೊಡಗಿಸಿಕೊಂಡರು.
ಮೇಳದಲ್ಲಿ ಮನೆ ಬಳಕೆಯ ವಸ್ತುಗಳಿಂದ ಅಲಂಕಾರಿಕ ಸಾಮಗ್ರಿಗಳವರೆಗೆ, ಹೋಂ ಮೇಡ್ ಉತ್ಪನ್ನಗಳಿಂದ ಆಯುರ್ವೇದ ಉತ್ಪನ್ನಗಳು ಹಾಗೂ ಖಾದಿ ವಸ್ತುಗಳವರೆಗೆ ಹಲವು ಬಗೆಯ ದೇಶೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಆಹಾರಪ್ರಿಯರನ್ನೂ ಮೇಳ ಕೈಬೀಸಿ ಕರೆಯುತ್ತಿದ್ದು, ದೋಸೆ, ವಡೆ, ಜಿಲೇಬಿ, ಹೋಳಿಗೆ, ಚಕ್ಕುಲಿ, ಕರ್ಜಿಕಾಯಿ ಸೇರಿದಂತೆ ಹಲವು ಬಗೆಯ ದೇಶೀಯ ಆಹಾರ ಪದಾರ್ಥಗಳು ಗಮನ ಸೆಳೆಯುತ್ತಿವೆ.
ಮೇಳದ ಸಂಘಟಕರಾದ ರಮೇಶ್ ಶಿವಮೊಗ್ಗ ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೆ.13ರವರೆಗೆ ನಡೆಯಲಿರುವ ಮೇಳಕ್ಕೆ ಸಾರ್ವಜನಿಕರು ಭೇಟಿ ನೀಡಿ ಸ್ವದೇಶಿ ಉತ್ಪನ್ನಗಳು ಹಾಗೂ ದೇಶೀಯ ಆಹಾರ ಪದಾರ್ಥಗಳ ಖರೀದಿ ಮಾಡುವ ಅವಕಾಶವಿದ್ದು, ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದರು.