ಬನವಾಸಿ: ಬನವಾಸಿಯ ಅಜ್ಜರಣಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಬನವಾಸಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಲಾಗಿದ್ದು, ಸೊರಬಾ ರಸ್ತೆಯ ನಿವಾಸಿ ದೇವರಾಜ ಚಂದ್ರಪ್ಪ ವಡ್ಡರ್ ಎಂಬಾತ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿಯ ಲಾಭ ನೀಡುವುದಾಗಿ ಆಮಿಷವೊಡ್ಡಿ ಹಣ ಪಡೆದು ಮಟ್ಕಾ ಜೂಜಾಟ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ.
ದಾಳಿಯ ವೇಳೆ ಆರೋಪಿಯಿಂದ ಓಸಿ ಚೀಟಿ, ₹450 ನಗದು ಹಾಗೂ ಒಂದು ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.