Friday, July 24, 2026
Join WhatsApp Group
HomeAgricultureಜಾಗತಿಕ ಮಾನ್ಯತೆ ಪಡೆದ ಸೂಜಿ ಮೆಣಸಿನ ಸೊಗಡು

ಜಾಗತಿಕ ಮಾನ್ಯತೆ ಪಡೆದ ಸೂಜಿ ಮೆಣಸಿನ ಸೊಗಡು

ಪಶ್ಚಿಮ ಘಟ್ಟದ ಮಂಜು, ಮಳೆ ಮತ್ತು ಹಸಿರಿನ ನಡುವೆ ಸಹಜವಾಗಿ ಬೆಳೆಯುವ ಒಂದು ಪುಟ್ಟ ಮೆಣಸು ಇಂದು ಜಾಗತಿಕ ಮಾರುಕಟ್ಟೆಯ ಗಮನ ಸೆಳೆಯುತ್ತಿದೆ. ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಭಾಗಗಳಲ್ಲಿ ಸೂಜಿ ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು ಎಂದು ಕರೆಯಲ್ಪಡುವ ಈ ಪುಟ್ಟ ಮೆಣಸಿನ ಅಧಿಕೃತ ಹೆಸರು Bird’s Eye Chilli. ಗಾತ್ರದಲ್ಲಿ ಸಣ್ಣದಾದರೂ, ಖಾರದಲ್ಲಿ ಬೆಂಕಿಯಂತೆ ಉರಿಯುವ ಈ ಮೆಣಸು ರೈತರಿಗೆ ಹೊಸ ಕಿರು ಆದಾಯದ ದಾರಿಯೂ ಹೌದು.

ಏನಿದು ಬರ್ಡ್‌ ಐ ಚಿಲ್ಲಿ?

ಸಾಮಾನ್ಯ ಹಸಿಮೆಣಸಿನಂತೆ ಉದ್ದವಾಗಿರದೆ, ಸಣ್ಣದಾಗಿ ಮತ್ತು ತೀಕ್ಷ್ಣ ತುದಿಯೊಂದಿಗೆ ಕಾಣಿಸುವ ಈ ಮೆಣಸಿನಕಾಯಿ ಹಸಿ ಸ್ಥಿತಿಯಲ್ಲಿ ಹಸಿರು ಬಣ್ಣದಲ್ಲಿದ್ದು, ಹಣ್ಣಾದ ಬಳಿಕ ಕೆಂಪು ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. “Bird’s Eye” ಎಂಬ ಹೆಸರು ಬರಲು ಕಾರಣ, ಕಾಡುಪಕ್ಷಿಗಳು ಈ ಮೆಣಸಿನ ಕಾಯಿಯನ್ನು ತಿನ್ನಿ ಬೀಜಗಳನ್ನು ಹರಡುವುದೆಂದು ಹೇಳಲಾಗುತ್ತದೆ.

ಈ ಮೆಣಸಿನಲ್ಲಿ ಇರುವ Capsaicin ಅಂಶವೇ ಅದರ ತೀವ್ರ ಖಾರದ ಮೂಲ. ಸಾಮಾನ್ಯ ಮೆಣಸಿಗಿಂತ ಹಲವು ಪಟ್ಟು ಹೆಚ್ಚು ಖಾರ ಇರುವುದರಿಂದ ಅಡುಗೆಯಲ್ಲಿ ಅತಿ ಕಡಿಮೆ ಪ್ರಮಾಣದ ಬಳಕೆ ಸಾಕಾಗುತ್ತದೆ.

ಉತ್ತರ ಕನ್ನಡದ ವಿಶೇಷ ಬೆಳೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಶಿರಸಿ, ಜೊಯಿಡಾ ಭಾಗಗಳಲ್ಲಿನ ಮಳೆಯ ಹವಾಮಾನ ಈ ಮೆಣಸಿಗೆ ಅತ್ಯಂತ ಸೂಕ್ತ. ಬಹುತೇಕ ಮನೆಗಳ ಹಿತ್ತಲಲ್ಲಿ, ಅರಣ್ಯದ ಅಂಚಿನಲ್ಲಿ ಅಥವಾ ಅಡಿಕೆ ತೋಟದ ನಡುವೆ ಸಹಜವಾಗಿ ಬೆಳೆಯುತ್ತದೆ. ಹೆಚ್ಚು ರಾಸಾಯನಿಕಗಳ ಅಗತ್ಯವಿಲ್ಲದ ಕಾರಣ ಜೈವಿಕ ಕೃಷಿಗೆ ಇದು ಉತ್ತಮ ಆಯ್ಕೆ.

ಇತ್ತೀಚೆಗೆ ಹಲವಾರು ರೈತರು ವಾಣಿಜ್ಯ ಮಟ್ಟದಲ್ಲೂ ಈ ಮೆಣಸಿನ ಬೆಳೆ ಆರಂಭಿಸಿದ್ದಾರೆ. ಒಣಗಿಸಿದ ಸೂಜಿ ಮೆಣಸು, ಮೆಣಸಿನ ಪುಡಿ, ಉಪ್ಪಿನಕಾಯಿ ಹಾಗೂ ಸಾಸ್‌ಗಳಿಗೆ, ವಿಶೇಷವಾಗಿ ಮಾಂಸಾಹಾರಿ ಅಡುಗೆಎಗಳಲ್ಲಿ ಉತ್ತಮ ಬೇಡಿಕೆ ಇದೆ.

ಆರೋಗ್ಯಕ್ಕೂ ಲಾಭ

ಈ ಪುಟ್ಟ ಮೆಣಸಿನಲ್ಲಿ ವಿಟಮಿನ್ C, ಆಂಟಿಆಕ್ಸಿಡೆಂಟ್‌ಗಳು ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣಗಳಿವೆ. ಹಸಿವನ್ನು ಹೆಚ್ಚಿಸುವುದು, ಜೀರ್ಣಕ್ರಿಯೆ ಸುಧಾರಿಸುವುದು ಹಾಗೂ ಶೀತ ಸಮಸ್ಯೆ ಕಡಿಮೆ ಮಾಡುವಲ್ಲಿ ಇದು ಸಹಾಯಕ ಎಂದು ಜನಪದ ವೈದ್ಯಕೀಯದಲ್ಲಿ ನಂಬಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಬೇಡಿಕೆ

ಇಂದು Bird’s Eye Chilli ಭಾರತ ಮಾತ್ರವಲ್ಲ, ಥೈಲ್ಯಾಂಡ್‌, ಆಫ್ರಿಕಾ ಮತ್ತು ಯೂರೋಪಿನ ಆಹಾರ ಪದ್ಧತಿಗಳಲ್ಲೂ ಬಹುಪ್ರಚಲಿತವಾಗಿದೆ. ಖಾರದ ಸಾಸ್‌, ಸ್ಪೈಸಿ ಫುಡ್‌ ಮತ್ತು ಔಷಧೀಯ ಉತ್ಪನ್ನಗಳಲ್ಲೂ ಇದರ ಬಳಕೆ ಹೆಚ್ಚು. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಒಣಗಿದ ಸೂಜಿ ಮೆಣಸು ಉತ್ತಮ ದರಕ್ಕೆ ಮಾರಾಟವಾಗುತ್ತಿದೆ.

ಕಾಡಿನಿಂದ ವಿಶ್ವದ ಅಡಿಗೆಮನೆವರೆಗೆ

ಒಂದು ಕಾಲಕ್ಕೆ ಹಳ್ಳಿಗಳ ಅಡಿಗೆ ಮನೆಗಷ್ಟೇ ಸೀಮಿತವಾಗಿದ್ದ ಸೂಜಿ ಮೆಣಸು ಇಂದು ಜಾಗತಿಕ ಖಾದ್ಯ ಲೋಕದ ಗಮನ ಸೆಳೆದಿದೆ. ಗಾತ್ರದಲ್ಲಿ ಚಿಕ್ಕದಾದರೂ, ರೈತರ ಬದುಕಿಗೆ ದೊಡ್ಡ ಅವಕಾಶವಾಗುತ್ತಿರುವ ಈ ಕಾಡಿನ ಕಿಚ್ಚು, ಉತ್ತರ ಕನ್ನಡದ ಮಣ್ಣಿನ ಮತ್ತೊಂದು ವಿಶಿಷ್ಟ ಹೆಮ್ಮೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರೈತರು ಇಂತಹ ಬೆಳೆಗಳನ್ನು ಸಣ್ಣ ಆದಾಯದ ಮೂಲ ಎಂದು ನಿರ್ಲಕ್ಷಿಸದೇ ಆಸಕ್ತಿಯಿಂದ ಪಾಲಿಸಿದರೆ ಸಣ್ಣಪುಟ್ಟ ಕೈಖರ್ಚಿಗಾಗುವಷ್ಟಾದರೂ ಆದಾಯ ತಂದುಕೊಡಬಲ್ಲವು.

– ಸಂಗೀತಾ ಭಟ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share