ಶಿರಸಿ: ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆ ಶಿರಸಿಯ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಮುಂಬರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಯಶಸ್ವಿಗೊಳಿಸುವ ಕುರಿತು ಚರ್ಚಿಸಲಾಯಿತು.
ಹರ್ ಘರ್ ತಿರಂಗಾ ಸಂಚಾಲಕ ಸುಬ್ರಾಯ ವಾಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ರಾಜ್ಯ ಹರ್ ಘರ್ ತಿರಂಗಾ ಸಂಚಾಲಕಿ ರೂಪಾಲಿ ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮವನ್ನು ವ್ಯಕ್ತಪಡಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಜಾಗೃತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದ ಅವರು, ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಆರ್.ಡಿ. ಹೆಗಡೆ ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಸಮಾರೋಪದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದಕ್ಕಾಗಿ ಕಾರ್ಯಕರ್ತರಿಗೆ ಅಭಿನಂದನೆಗಳು. ಮುಂದಿನ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನೂ ಇದೇ ರೀತಿಯಲ್ಲಿ ಯಶಸ್ವಿಗೊಳಿಸೋಣ ಎಂದರು.
ಇದೇ ಸಂದರ್ಭದಲ್ಲಿ ರೂಪಾಲಿ ನಾಯ್ಕ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಯ ಪ್ರತಿಯೊಂದು ಮಂಡಲಕ್ಕೆ ತಲಾ 500 ರಾಷ್ಟ್ರಧ್ವಜಗಳನ್ನು ವಿತರಿಸಿದರು.
ಸಭೆಯಲ್ಲಿ ನಿಕಟಪೂರ್ವ ಶಾಸಕರಾದ ಸುನಿಲ್ ಹೆಗಡೆ, ಸುನಿಲ್ ನಾಯ್ಕ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್, ಕೆ.ಜಿ. ನಾಯ್ಕ್, ಗೋವಿಂದ ನಾಯ್ಕ್, ಅಶೋಕ ಛಲವಾದಿ, ಎಂ.ಜಿ. ಭಟ್, ಸಂತೋಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.