Monday, September 7, 2026
Join WhatsApp Group
HomeCrimeಜಮೀನು ಹಂಚಿಕೆ ವಿಚಾರಕ್ಕೆ ಥಳಿತ

ಜಮೀನು ಹಂಚಿಕೆ ವಿಚಾರಕ್ಕೆ ಥಳಿತ

ಸಹೋದರನ ಮೇಲೆ ಹಲ್ಲೆ, ಜೀವ ಬೆದರಿಕೆ; ಪ್ರಕರಣ ದಾಖಲು

ಶಿರಸಿ: ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಪಾಲು ಕೇಳಿದ ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಗಲಾಟೆ ನಡೆದು, ವ್ಯಕ್ತಿಯೊಬ್ಬರ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿದ ಆರೋಪದಡಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿ ತಾಲೂಕಿನ ವಾನಳ್ಳಿ ಗ್ರಾಮದ ಹಾವಿನಗದ್ದೆಯಲ್ಲಿ ಜುಲೈ 28ರಂದು ರಾತ್ರಿ ಸುಮಾರು 9.30ಕ್ಕೆ ಘಟನೆ ನಡೆದಿದ್ದು, ಗಾಯಗೊಂಡಿರುವ ಮಂಜುನಾಥ ಗಣಪತಿ ಗೌಡ (36) ಅವರು ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಜುನಾಥ ಅವರ ತಂದೆಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯ ಮಕ್ಕಳಾದ ತಿಮ್ಮ ಗಣಪತಿ ಗೌಡ (55) ಮತ್ತು ಪುಟ್ಟಾ ಗಣಪತಿ ಗೌಡ (53) ಹಾಗೂ ಎರಡನೇ ಪತ್ನಿಯ ಮಗ ಮಂಜುನಾಥ.

ತಂದೆಯ ಆಸ್ತಿಯಲ್ಲಿ ತಿಮ್ಮ ಮತ್ತು ಪುಟ್ಟಾ ತಲಾ ಸುಮಾರು 1 ಎಕರೆ 15 ಗುಂಟೆ ಜಮೀನು ಪಡೆದಿದ್ದು, ಮಂಜುನಾಥ ಅವರಿಗೆ ಕೇವಲ 30 ಗುಂಟೆ ಜಮೀನು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಂದೆಯ ಹೆಸರಿನಲ್ಲಿ ಇನ್ನೂ ಸುಮಾರು 24 ಗುಂಟೆ ಜಮೀನು ಉಳಿದಿತ್ತು.

ಈ ಜಮೀನಿನ ವಿಚಾರವೇ ಸಹೋದರರ ನಡುವಿನ ಗಲಾಟೆಗೆ ಕಾರಣವಾಗಿದೆ. ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲೂ ಪಾಲು ನೀಡಬೇಕು ಎಂದು ಆರೋಪಿತರು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಜುಲೈ 28ರಂದು ರಾತ್ರಿ ಆರೋಪಿತರು ತಂದೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಮಂಜುನಾಥ ಅವರು ಮಧ್ಯೆ ಮಾತನಾಡಿ, ಈಗಾಗಲೇ ಹೆಚ್ಚಿನ ಜಮೀನು ಪಡೆದುಕೊಂಡಿದ್ದೀರಿ, ತಂದೆಯ ಆಸ್ತಿಯಲ್ಲಿ ಯಾರಿಗೂ ಪಾಲು ನೀಡುವುದಿಲ್ಲ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

ಈ ವೇಳೆ ಗಣೇಶ ತಿಮ್ಮಾ ಗೌಡ (35) ಎಂಬಾತ ಹಗ್ಗದಿಂದ ಮಂಜುನಾಥ ಅವರ ಕೈ-ಕಾಲುಗಳನ್ನು ಸುತ್ತಿ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಪುಟ್ಟಾ ಗೌಡ ಕೈಯಿಂದ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದರೆ, ತಿಮ್ಮಾ ಗೌಡ ಕಟ್ಟಿಗೆಯಿಂದ ಎಡಗಾಲಿನ ಪಾದದ ಗಂಟಿನ ಬಳಿ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಷ್ಟಕ್ಕೆ ನಿಲ್ಲದೆ, “ಈ ದಿನ ಉಳಿದುಕೊಂಡೆ, ಇನ್ನೊಂದು ದಿನ ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share