ಹೊನ್ನಾವರ: ಪರಿಚಯವಿರುವವನಂತೆ ಮಾತನಾಡಿ ಬೈಕ್ನಲ್ಲಿ ಕರೆದೊಯ್ದ ಅಪರಿಚಿತ ವ್ಯಕ್ತಿಯೊಬ್ಬ, ದಾರಿಮಧ್ಯೆ ಬೆದರಿಸಿ ರೈತನ ಬಳಿಯಿದ್ದ ಹಣ ಕಸಿದುಕೊಂಡು ಪರಾರಿಯಾದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ದುಗ್ಗೂರು ಗ್ರಾಮದ ಶಂಕರ ವಿಠೋಬ ನಾಯ್ಕ (58) ಅವರು ಆಗಸ್ಟ್ 7ರಂದು ಬೆಳಗ್ಗೆ ಮನೆಯಿಂದ ಹೊನ್ನಾವರ ಅರ್ಬನ್ ಬ್ಯಾಂಕ್ಗೆ ಬಂದಿದ್ದರು. ಬ್ಯಾಂಕ್ನಲ್ಲಿ ತಮ್ಮ ಬಂಗಾರದ ಸರವನ್ನು ಅಡವಿಟ್ಟು 1.50 ಲಕ್ಷ ರೂ ಹಣ ಪಡೆದಿದ್ದರು.
ಅದರಲ್ಲಿ 3,500 ರೂ ಶರ್ಟ್ ಜೇಬಿನಲ್ಲಿಟ್ಟುಕೊಂಡು, ಉಳಿದ 1,46,500 ರೂ ಹಣವನ್ನು ಕೈಚೀಲದಲ್ಲಿಟ್ಟುಕೊಂಡಿದ್ದರು. ಸುಮಾರು ಮಧ್ಯಾಹ್ನ 12 ಗಂಟೆಗೆ ಬ್ಯಾಂಕ್ನಿಂದ ಹೊರಬಂದು ರಸ್ತೆಗೆ ಬಂದಾಗ, ಬಸ್ ನಿಲ್ದಾಣದ ಕಡೆಯಿಂದ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಶಂಕರ ಅವರ ಬಳಿ ಬೈಕ್ ನಿಲ್ಲಿಸಿ, “ಅಣ್ಣಾ ಬನ್ನಿ, ಬೈಕ್ನಲ್ಲಿ ಬಿಡುತ್ತೇನೆ” ಎಂದು ಹೇಳಿದ್ದಾನೆ ಎನ್ನಲಾಗಿದೆ.
ಮೊದಲಿಗೆ ಶಂಕರ ಅವರು ನಿರಾಕರಿಸಿದರೂ, ಆತ ಪರಿಚಯವಿರುವವನಂತೆ ಮಾತನಾಡಿದ್ದರಿಂದ ಕೊನೆಗೆ ಬೈಕ್ ಹತ್ತಿದ್ದಾರೆ.ಆದರೆ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅಪರಿಚಿತನ ವರಸೆ ಬದಲಾಗಿದೆ. ತನ್ನ ಬಳಿ ಇರುವ ಹಣವನ್ನು ಕೊಡುವಂತೆ ಆತ ಒತ್ತಾಯಿಸಿದ್ದಾನೆ. ಹಣ ನೀಡಲು ನಿರಾಕರಿಸಿದಾಗ, ಹಣ ಕೊಡದಿದ್ದರೆ ಬೈಕ್ನಿಂದ ಕೆಳಗೆ ಬೀಳಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಯಗೊಂಡ ಶಂಕರ ಅವರು ಬೈಕ್ ನಿಲ್ಲಿಸುವಂತೆ ಕೇಳಿಕೊಂಡರೂ, ಆರೋಪಿ ಬೈಕ್ ನಿಲ್ಲಿಸದೆ ಹೊನ್ನಾವರ ಟೆಲಿಫೋನ್ ಕಚೇರಿ ಬಳಿ ಬಂದು ನಿಲ್ಲಿಸಿದ್ದಾನೆ. ಬಳಿಕ ಶಂಕರ ಅವರ ಶರ್ಟ್ ಜೇಬಿನಲ್ಲಿದ್ದ 3,500 ರೂ ಹಣವನ್ನು ಬಲವಂತವಾಗಿ ತೆಗೆದುಕೊಂಡು KA-47 Y-0044 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯನ್ನು ಮತ್ತೆ ನೋಡಿದರೆ ಗುರುತಿಸುವುದಾಗಿ ಶಂಕರ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.