ಪ್ರತಿದಿನ ನಾವು ಶಾಲೆಗೆ, ಕೆಲಸಕ್ಕೆ, ಮಾರುಕಟ್ಟೆಗೆ ಹೋಗುವಾಗ ಎಷ್ಟೋ ಸೇತುವೆಗಳನ್ನು ದಾಟುತ್ತೇವೆ. ಆದರೆ ಆ ಸೇತುವೆ ಎಷ್ಟು ವರ್ಷಗಳ ಹಿಂದೆ ನಿರ್ಮಾಣವಾಗಿದೆ, ಅದು ಇನ್ನೂ ಸುರಕ್ಷಿತವಾಗಿದೆಯೇ, ಅದರ ಆಯಸ್ಸು ಎಷ್ಟು ಎಂಬ ಪ್ರಶ್ನೆ ನಮ್ಮ ಮನಸ್ಸಿಗೆ ಬರುವುದಿಲ್ಲ. ಮಳೆಗಾಲದಲ್ಲಿ ಸೇತುವೆಯ ಕೆಳಗೆ ಉಕ್ಕಿ ಹರಿಯುವ ನದಿಯನ್ನು ನೋಡಿದಾಗ ಮಾತ್ರ ಅದರ ಬಗ್ಗೆ ಯೋಚಿಸುತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಮನುಷ್ಯನಿಗೆ ಹೇಗೆ ಒಂದು ಜೀವಿತಾವಧಿ ಇರುತ್ತದೆಯೋ, ಹಾಗೆಯೇ ಪ್ರತಿಯೊಂದು ಸೇತುವೆಗೂ ಒಂದು “ಡಿಸೈನ್ ಲೈಫ್” ಇರುತ್ತದೆ.
ಸೇತುವೆ ನಿರ್ಮಿಸುವಾಗಲೇ ಎಂಜಿನಿಯರ್ಗಳು ಅದು ಎಷ್ಟು ವರ್ಷ ಸುರಕ್ಷಿತವಾಗಿ ಸೇವೆ ಸಲ್ಲಿಸಬೇಕು ಎಂಬ ಲೆಕ್ಕಾಚಾರ ಮಾಡಿರುತ್ತಾರೆ. ಸಾಮಾನ್ಯವಾಗಿ ಕಾಂಕ್ರೀಟ್ (RCC) ಸೇತುವೆಗಳನ್ನು ಸುಮಾರು 100 ವರ್ಷಗಳ ಸೇವಾ ಅವಧಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗುತ್ತದೆ. ಸ್ಟೀಲ್ ಸೇತುವೆಗಳಿಗೂ ಉತ್ತಮ ನಿರ್ವಹಣೆ ಮಾಡಿದರೆ ದೀರ್ಘಾವಧಿ ಬಾಳಿಕೆ ಬರುತ್ತದೆ. ಆದರೆ ಈ ಲೆಕ್ಕಾಚಾರ ಮುಗಿದ ತಕ್ಷಣ ಸೇತುವೆ ಕುಸಿಯುತ್ತದೆ ಎಂದಲ್ಲ. ಸರಿಯಾದ ನಿರ್ವಹಣೆ ಮಾಡಿದರೆ ಇನ್ನೂ ಹಲವು ವರ್ಷ ಸುರಕ್ಷಿತವಾಗಿ ಬಳಸಬಹುದು. ನಿರ್ವಹಣೆ ಇಲ್ಲದಿದ್ದರೆ ಅದಕ್ಕಿಂತ ಮುಂಚೆಯೇ ಅಪಾಯವೂ ಎದುರಾಗಬಹುದು.
ಸೇತುವೆಯ ದೊಡ್ಡ ಶತ್ರು ಕೇವಲ ವಯಸ್ಸಲ್ಲ, ಪ್ರವಾಹ. ಮಳೆಗಾಲದಲ್ಲಿ ನದಿಯಲ್ಲಿ ಹರಿಯುವ ನೀರು ಸೇತುವೆಯ ಕಂಬಗಳ ಸುತ್ತಲಿನ ಮಣ್ಣನ್ನು ನಿಧಾನವಾಗಿ ಕೊರೆದು ಕರಗಿಸುತ್ತದೆ. ಇದನ್ನು ತಾಂತ್ರಿಕವಾಗಿ ಸ್ಕೌರಿಂಗ್ (Scouring) ಎಂದು ಕರೆಯುತ್ತಾರೆ. ಕಂಬಗಳ ಅಡಿಪಾಯ ದುರ್ಬಲವಾದರೆ ಸೇತುವೆಯ ಸ್ಥಿರತೆಯ ಮೇಲೆಯೇ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ದೊಡ್ಡ ಪ್ರವಾಹದ ನಂತರ ಅಧಿಕಾರಿಗಳು ಸೇತುವೆಗಳನ್ನು ಪರಿಶೀಲಿಸುತ್ತಾರೆ.
ಇದರ ಜೊತೆಗೆ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಐವತ್ತು ವರ್ಷಗಳ ಹಿಂದೆ ದಿನಕ್ಕೆ ನೂರು ವಾಹನಗಳು ಓಡುತ್ತಿದ್ದ ಸೇತುವೆಯ ಮೇಲೆ ಇಂದು ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅತಿಭಾರ ಹೊತ್ತ ಲಾರಿಗಳು, ನಿರಂತರ ಕಂಪನ, ತೇವಾಂಶ, ಉಕ್ಕಿನ ತುಕ್ಕು, ಕಾಂಕ್ರೀಟ್ ಬಿರುಕು ಇವೆಲ್ಲವೂ ಸೇರಿ ಸೇತುವೆಯ ಆರೋಗ್ಯವನ್ನು ನಿಧಾನವಾಗಿ ಹಾಳು ಮಾಡುತ್ತವೆ.
ಉತ್ತರ ಕನ್ನಡದಂತಹ ಮಲೆನಾಡು ಪ್ರದೇಶಗಳಲ್ಲಿ ಈ ಎಚ್ಚರಿಕೆ ಇನ್ನಷ್ಟು ಅಗತ್ಯ. ಇಲ್ಲಿ ಮಳೆ, ಪ್ರವಾಹ, ವೇಗದ ನದಿ ಹರಿವು ಮತ್ತು ಭೂಕುಸಿತಗಳು ಸಾಮಾನ್ಯ. ಆದ್ದರಿಂದ ಸೇತುವೆ ನಿರ್ಮಿಸುವುದಷ್ಟೇ ಮುಖ್ಯವಲ್ಲ, ಅದರ ಆರೋಗ್ಯವನ್ನು ಕಾಲಕಾಲಕ್ಕೆ ಪರೀಕ್ಷಿಸುವುದು ಇನ್ನೂ ಮುಖ್ಯ. ನಾವು ದಾಟುವ ಪ್ರತಿಯೊಂದು ಸೇತುವೆಯ ಹಿಂದೆ ಸಾವಿರಾರು ಜನರ ಸುರಕ್ಷತೆ ಅಡಗಿದೆ.
ಹೀಗಾಗಿ, ಸೇತುವೆ ಕುಸಿದ ನಂತರ ಪ್ರಶ್ನೆ ಕೇಳುವುದಕ್ಕಿಂತ, ಅದು ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುವ ವ್ಯವಸ್ಥೆಯೇ ನಿಜವಾದ ಅಭಿವೃದ್ಧಿಯ ಗುರುತು. ಕೆಲವೊಮ್ಮೆ ಒಂದು ಸೇತುವೆ ಕೇವಲ ಎರಡು ದಡಗಳನ್ನು ಮಾತ್ರವಲ್ಲ, ಸಾವಿರಾರು ಜನರ ಬದುಕನ್ನೂ ಸಂಪರ್ಕಿಸುತ್ತಿರುತ್ತದೆ!