Monday, September 7, 2026
Join WhatsApp Group
HomeLocal Newsಹೊಳೆ ಗಣಪತಿಯನ್ನೂ ಮುಳುಗಿಸಿದ ಮಳೆ

ಹೊಳೆ ಗಣಪತಿಯನ್ನೂ ಮುಳುಗಿಸಿದ ಮಳೆ

ಯಲ್ಲಾಪುರ/ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡ್ಡ ಕುಸಿತ, ವಿದ್ಯುತ್ ವ್ಯತ್ಯಯ, ರಸ್ತೆಗಳ ಮೇಲೆ ಮರಗಳು ಉರುಳಿರುವ ಘಟನೆಗಳು ವರದಿಯಾಗುತ್ತಿರುವ ನಡುವೆಯೇ, ಯಲ್ಲಾಪುರ ತಾಲೂಕಿನ ಪ್ರಸಿದ್ಧ ಗಣೇಶಪಾಲ್ ಹೊಳೆ ಗಣಪತಿ ಕೂಡ ಮಳೆ ನೀರಿನಲ್ಲಿ ಮುಳುಗಿದ್ದಾನೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಹಾಗೂ ಶಿರಸಿ ತಾಲೂಕಿನ ಕೋಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಧ್ಯೆ ಹರಿಯುವ ಶಾಲ್ಮಲಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ, ನದಿಯ ತಟದಲ್ಲಿರುವ ಗಣೇಶಪಾಲ್ ಗಣಪತಿಯ ಮೂರ್ತಿ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ವರ್ಷದಲ್ಲಿ ಸುಮಾರು ಆರು ತಿಂಗಳು ಮಾತ್ರ ಭಕ್ತರಿಗೆ ದರ್ಶನ ನೀಡುವ ಈ ವಿಶಿಷ್ಟ ಗಣಪತಿ, ಮಳೆಗಾಲದಲ್ಲಿ ಬಹುತೇಕ ಸಮಯ ನೀರಿನಲ್ಲೇ ಮುಳುಗಿರುವುದು ಇಲ್ಲಿನ ವಿಶೇಷ.

ಇತರ ದೇವಾಲಯಗಳಂತೆ ಈ ಗಣಪತಿಗೆ ಗರ್ಭಗುಡಿ ಅಥವಾ ಶಾಶ್ವತ ದೇವಾಲಯ ಇಲ್ಲ. ಪ್ರಕೃತಿಯ ಮಡಿಲಲ್ಲೇ ನೆಲೆಸಿರುವ ಈ ಮೂರ್ತಿಯನ್ನು ನೋಡಲು ಬೇಸಿಗೆ ಹಾಗೂ ಮಳೆ ಕಡಿಮೆಯಾದ ಸಂದರ್ಭದಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಇದೇ ವೇಳೆ, ಯಲ್ಲಾಪುರ–ಶಿರಸಿ ಸಂಪರ್ಕ ಕಲ್ಪಿಸುವ ಮಹತ್ವದ ಗಣೇಶಪಾಲ್ ಸೇತುವೆ ನಿರ್ಮಾಣ ಕಾಮಗಾರಿಗೂ ಮಳೆಯ ಪರಿಣಾಮ ತಟ್ಟಿದೆ. ಸೇತುವೆ ನಿರ್ಮಾಣಕ್ಕಾಗಿ ಸ್ಥಳದಲ್ಲಿ ಸಂಗ್ರಹಿಸಿದ್ದ ಉಕ್ಕಿನ ರಚನೆಗಳು ಹಾಗೂ ಇತರ ನಿರ್ಮಾಣ ಸಾಮಗ್ರಿಗಳು ಪ್ರವಾಹದ ನೀರಿನಲ್ಲಿ ಬಹುತೇಕ ಮುಳುಗಿವೆ.

ಗಣೇಶಪಾಲ್ ಸೇತುವೆ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದಿನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಾಗೂ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದ ಫಲವಾಗಿ ಕೆಆರ್‌ಡಿಸಿಎಲ್ ಮೂಲಕ ₹112 ಕೋಟಿ ಅನುದಾನ ಮಂಜೂರಾಗಿತ್ತು. 2022ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ದೊರೆತು, 2023ರಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಾಲ್ಮಲಾ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ನದಿ ತೀರದ ಪ್ರದೇಶಗಳಲ್ಲಿ ಸ್ಥಳೀಯರು ಎಚ್ಚರಿಕೆ ವಹಿಸುವಂತೆ ಆಡಳಿತ ಮನವಿ ಮಾಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share