Saturday, September 19, 2026
Join WhatsApp Group
HomeCrimeಅಜ್ಜಿಯನ್ನು ಬೆದರಿಸಿ ಆಭರಣ ಕದ್ದ ಇಬ್ಬರ ಬಂಧನ

ಅಜ್ಜಿಯನ್ನು ಬೆದರಿಸಿ ಆಭರಣ ಕದ್ದ ಇಬ್ಬರ ಬಂಧನ

ಹಳಿಯಾಳ: ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಜ್ಜಿಯನ್ನು ಭಯಪಡಿಸಿ, ಕೊರಳಲ್ಲಿದ್ದ ಸುಮಾರು 1.20 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಹಳಿಯಾಳ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಸೆ.7ರಂದು ಬೆಳಿಗ್ಗೆ 11.30ರ ಸುಮಾರಿಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಪಿರ್ಯಾದಿದಾರರ ಹಳೆಯ ಮನೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ಮಂಜುನಾಥ ಜುಂಜವಾಡಕರ ಎಂಬಾತ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಜ್ಜಿಯನ್ನು ಬೆದರಿಸಿ, ಅವರ ಕೊರಳಲ್ಲಿದ್ದ ಸುಮಾರು 1.20 ಲಕ್ಷ ರೂ ಮೌಲ್ಯದ 6 ಕೊಳವೆ, 4 ಗುಂಡುಗಳು ಹಾಗೂ 2 ತಾಳಿಯಿರುವ ಬಂಗಾರದ ಆಭರಣಗಳನ್ನು ಬ್ಲೇಡ್‌ನಿಂದ ಕತ್ತರಿಸಿ ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ಹಳಿಯಾಳ ಪೊಲೀಸರು ವಿಶೇಷ ಪತ್ತೆ ತಂಡವನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಸೆ.10ರಂದು ಧಾರವಾಡ ಜಿಲ್ಲೆಯ ತಪೋವನ ನಗರದಲ್ಲಿ ಆರೋಪಿಗಳಾದ ಮಂಜುನಾಥ ಶಿವಾಜಿ ಜುಂಜವಾಡಕರ ಧಾರವಾಡ ಹಾಗೂ ಅರ್ಜುನ್ ಬಸಪ್ಪ ಹಡಪದ, ಹಳ್ಳಿಗೇರಿ, ಧಾರವಾಡ ಎಂಬುವರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಂದ ಸುಮಾರು 1.20 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ 50 ಸಾವಿರ ರೂ ಮೌಲ್ಯದ ಕೆಎ-65 ಇಎನ್-2055 ನೋಂದಣಿ ಸಂಖ್ಯೆಯ ಎಚ್‌ಎಫ್ ಡಿಲಕ್ಸ್ ಮೋಟಾರ್ ಸೈಕಲ್‌ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಪ್ರಕರಣದ ಪತ್ತೆ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಸಿಪಿಐ ಭೀಮಣ್ಣ ಸೋರಿ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಾಚರಣೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ್ ಕಾಂಬಳೆ (ಕಾ&ಸು), ಪಿಎಸ್‌ಐ ಮಹೇಶ್ ಮಾಳಿ (ತನಿಖೆ), ಸಿಬ್ಬಂದಿಗಳಾದ ಜಗದೀಶ ಕುಂಬಾರ, ಶ್ರೀಶೈಲ್ ಜಿ.ಎಂ., ವಿನೋದ್ ಜಿ.ಬಿ., ಲಕ್ಷ್ಮಣ ಪೂಜಾರಿ, ನಿಂಗಪ್ಪ ಬಳ್ಳಾರಿ, ಮಂಜುನಾಥ ಬಾಲಿ, ಬಸವರಾಜ್ ತ್ಯಾಪಿ, ಬಸವರಾಜ್ ಚವಡಿ, ಸೋಹೇಲ್ ನಾಗನೂರ ಭಾಗವಹಿಸಿದ್ದರು. ಜೀಪ್ ಚಾಲಕರಾದ ಗಂಗಾಧರ ತಳಗಲಮನಿ ಹಾಗೂ ಉಮೇಶ್ ತೇಲಿ ಅವರು ಸಹ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share